ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ವಿದೇಶ

'ಬಲವಾದ ಮತ್ತು ಸ್ಥಿರ ಸಂಬಂಧ' ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ: ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅಭಿಪ್ರಾಯ ಸ್ವಾಗತಿಸಿದ ಚೀನಾ

Lingaraj Badiger

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧ ಇಡೀ ಪ್ರದೇಶ ಮತ್ತು ಜಗತ್ತಿಗೆ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಚೀನಾ, "ಬಲವಾದ ಮತ್ತು ಸ್ಥಿರ ಸಂಬಂಧ" ಎರಡೂ ದೇಶಗಳ ನಡುವಿನ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತವೆ ಎಂದು ಗುರುವಾರ ಹೇಳಿದೆ.

ನಿನ್ನೆ ಪ್ರಧಾನಿ ಮೋದಿ ಅವರು ಅಮೆರಿಕದ ನ್ಯೂಸ್‌ವೀಕ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಪಾಸಿಟಿವ್ ಹಾಗೂ ರಚನಾತ್ಮಕ ದ್ವಿಪಕ್ಷೀಯ ಮಾತುಕತೆಯ ಮೂಲಕ ಭಾರತ-ಚೀನಾ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದ್ದರು.

ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೋ ನಿಂಗ್ ಅವರು, ಭಾರತದ ಪ್ರಧಾನಿಯ ಹೇಳಿಕೆಗಳನ್ನು ಚೀನಾ ಗಮನಿಸಿದೆ. ಭಾರತ ಮತ್ತು ಚೀನಾ ನಡುವೆ ಗಟ್ಟಿ ಸಂಬಂಧ ಇದ್ದರೆ ಎರಡೂ ದೇಶಗಳಿಗೆ ಸಹಾಯವಾಗುತ್ತದೆ. ಈ ಪ್ರದೇಶ ಹಾಗೂ ಅದರಾಚೆ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯ ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.

ಗಡಿವಿಚಾರವು ಭಾರತ ಮತ್ತು ಚೀನಾದ ಇಡೀ ಸಂಬಂಧವನ್ನು ಪ್ರತಿನಿಧಿಸುವುದಿಲ್ಲ. ದ್ವಿಪಕ್ಷೀಯ ಸಂಬಂಧದಲ್ಲಿ ಸೂಕ್ತ ಜಾಗದಲ್ಲಿ ಈ ಗಡಿ ವಿಚಾರವನ್ನು ಇರಿಸಬೇಕು. ಅದನ್ನು ಸರಿಯಾಗಿ ನಿರ್ವಹಿಸಬೇಕು. ಚೀನಾದ ದಾರಿಯಲ್ಲೇ ಭಾರತವೂ ಸಾಗಿ ಬರುತ್ತದೆ ಎಂದು ಆಶಿಸುತ್ತೇನೆ ಎಂದು ಚೀನಾ ವಿದೇಶಾಂಗ ವಕ್ತಾರೆ ತಿಳಿಸಿದ್ದಾರೆ.

"ದ್ವಿಪಕ್ಷೀಯ ಮಾತುಕತೆಯ ಮೂಲಕ ನಮ್ಮ ಗಡಿಯಲ್ಲಿನ ದೀರ್ಘಕಾಲದ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ ಎಂಬುದು ನನ್ನ ನಂಬಿಕೆ. ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧ ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಡೀ ಪ್ರದೇಶ ಮತ್ತು ಪ್ರಪಂಚ"ಕ್ಕೆ ಮುಖ್ಯ ಎಂದು ಪ್ರಧಾನಿ ಮೋದಿ ಅವರು ನ್ಯೂಯಾರ್ಕ್ ಮೂಲದ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

SCROLL FOR NEXT