ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯ ಬಗ್ಗೆ ಯುಕ್ರೇನ್ ನಾಯಕ ವೊಲೊದಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಉಂಟಾದ ಹಿನ್ನಡೆ ಎಂದು ಝೆಲೆನ್ಸ್ಕಿ ಬಣ್ಣಿಸಿದ್ದು, ಮೋದಿ ರಷ್ಯಾ ಭೇಟಿಯಿಂದ ತೀವ್ರ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.
ಸೋಮವಾರದಿಂದ 2 ದಿನಗಳ ರಷ್ಯಾ ಪ್ರವಾಸದಲ್ಲಿರುವ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮಾಸ್ಕೋದ ಉಪನಗರದಲ್ಲಿರುವ ಅವರ ಮನೆಯಲ್ಲಿ ಭೇಟಿಯಾದರು ಮತ್ತು ಸಭೆಯ ಚಿತ್ರಗಳು ಉಭಯ ನಾಯಕರು ಆತ್ಮೀಯ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ತೋರಿಸಿದೆ.
ಯುಕ್ರೇನ್‌ನ ರಾಜಧಾನಿ ಕೈವ್‌ನಲ್ಲಿರುವ ಅತಿದೊಡ್ಡ ಮಕ್ಕಳ ಆಸ್ಪತ್ರೆಯಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ ಮೂವರು ಮಕ್ಕಳು ಸೇರಿದಂತೆ 37 ಜನರು ಸಾವನ್ನಪ್ಪಿದರು ಮತ್ತು 170 ಜನರು ಗಾಯಗೊಂಡ ದಿನದಂದು ಮೋದಿ ಮತ್ತು ಪುಟಿನ್ ಭೇಟಿಯ ಕುರಿತು ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದಿದ್ದಾರೆ.
"ರಷ್ಯಾದ ಕ್ರೂರ ಕ್ಷಿಪಣಿ ದಾಳಿಯ ಪರಿಣಾಮವಾಗಿ ಯುಕ್ರೇನ್‌ನಲ್ಲಿ ಇಂದು 37 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಮೂವರು ಮಕ್ಕಳು ಮತ್ತು 13 ಮಕ್ಕಳು ಸೇರಿದಂತೆ 170 ಜನರು ಗಾಯಗೊಂಡಿದ್ದಾರೆ. ಇಂತಹ ದಿನದಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ಮಾಸ್ಕೋದಲ್ಲಿ ತಬ್ಬಿಕೊಳ್ಳುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ಭಾರಿ ನಿರಾಶೆ ಮತ್ತು ವಿನಾಶಕಾರಿ ಹೊಡೆತವಾಗಿದೆ ”ಎಂದು ಯುಕ್ರೇನಿಯನ್ ನಾಯಕ ಹೇಳಿದ್ದಾರೆ.
ಯುಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮೋದಿ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಯುಕ್ರೇನ್‌ನಲ್ಲಿ ಮಕ್ಕಳ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆದ ದಿನವೇ ಮಾಸ್ಕೋದಲ್ಲಿ ವಿಶ್ವಬಂಧು ಎಂಬ ಬಿರುದು ಪಡೆದ ಸ್ವಯಂ ಘೋಷಿತ ವಿಶ್ವಗುರು, ಯುಕ್ರೇನ್ ನಲ್ಲಿ ಯುದ್ಧ ನಿಲ್ಲಿಸುತ್ತೇವೆ ಎಂಬ ಹೆಗ್ಗಳಿಕೆ ಏನಾಯಿತು?,'' ಎಂದು ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.