ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಸಂಸತ್ತಿನಲ್ಲಿ ವಿಶ್ವಾಸಮತ ಕಳೆದುಕೊಳ್ಳುವ ಒಂದು ದಿನ ಮುಂಚೆ ಬೀಜಿಂಗ್‌ನ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಉಪಕ್ರಮದ ಅಡಿಯಲ್ಲಿ ಚೀನಾದೊಂದಿಗೆ ರೈಲು ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ.
ಹಿಮಾಲಯ ರಾಷ್ಟ್ರವನ್ನು ಚೀನಾದೊಂದಿಗೆ ರೈಲು ಮೂಲಕ ಸಂಪರ್ಕಿಸುವ ಒಪ್ಪಂದಕ್ಕೆ ಕಮಲ್ ದಹಾಲ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ, MyRepublica ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ನೇಪಾಳ ಮತ್ತು ಚೀನಾ ನಡುವಿನ ‘ಟ್ರಾನ್ಸ್-ಹಿಮಾಲಯನ್ ಮಲ್ಟಿಡೈಮೆನ್ಷನಲ್ ಕನೆಕ್ಟಿವಿಟಿ ನೆಟ್‌ವರ್ಕ್ ನಿರ್ಮಾಣದಲ್ಲಿ ಅಭಿವೃದ್ಧಿ ಸಹಕಾರವನ್ನು ಬಲಪಡಿಸುವ’ ಒಪ್ಪಂದಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಂವಹನ ಸಚಿವೆ ಮತ್ತು ಸರ್ಕಾರದ ವಕ್ತಾರೆ ರೇಖಾ ಶರ್ಮಾ ಅವರು ಹೇಳಿದ್ದಾರೆ.
ಆದಾಗ್ಯೂ, "ಇದು ಆರಂಭಿಕ ನಿರ್ಧಾರ; ಯೋಜನೆಯ ಅನುಷ್ಠಾನ ಮತ್ತು BRI ವಿಧಾನಗಳ ವಿವರಗಳು ಇನ್ನೂ ಅಂತಿಮಗೊಂಡಿಲ್ಲ." ಎಂದು ಸಚಿವರು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಪಾಲುದಾರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸ್‌ಸ್ಟ್ ಲೆನಿನಿಸ್ಟ್(CPN-UML) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮತ್ತು ನೇಪಾಳಿ ಕಾಂಗ್ರೆಸ್‌ನೊಂದಿಗೆ ತಡರಾತ್ರಿಯ ಸಮ್ಮಿಶ್ರ ಸರ್ಕಾರ ರಚನೆ ಒಪ್ಪಂದ ಮಾಡಿಕೊಂಡ ನಂತರ ಪ್ರಚಂಡ ಅವರು ವಿಶ್ವಾಸ ಮತಕ್ಕೆ ಕರೆ ನೀಡಿದರು. ಅದರಲ್ಲಿ ಪ್ರಚಂಡ ಅವರಿಗೆ ಬಹುಮತ ಲಭ್ಯವಾಗಿಲ್ಲ. ಹೀಗಾಗಿ ಪ್ರಧಾನಿ ಸ್ಥಾನಕ್ಕೆ ಪ್ರಚಂಡ ಅವರು ರಾಜೀನಾಮೆ ನೀಡಿದ್ದಾರೆ.