ಕುವೈತ್: ಕುವೈತ್‌ನ ದಕ್ಷಿಣ ನಗರವಾದ ಮಂಗಾಫ್‌ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಸಂತ್ರಸ್ತರಿಗೆ ನೆರವು ನೀಡುವುದಕ್ಕಾಗಿ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಕೆವಿ ಸಿಂಗ್ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ವಾಪಸ್ ಭಾರತಕ್ಕೆ ಕರೆತರುವುದಕ್ಕೆ ಸಚಿವರು ನೆರವು ನೀಡಲಿದ್ದಾರೆ.
ಕೆವಿ ಸಿಂಗ್ ಗೆ ಕುವೈತ್ ಗೆ ತೆರಳಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ದಕ್ಷಿಣ ಕುವೈತ್‌ನಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ 40 ಕ್ಕೂ ಹೆಚ್ಚು ಜನರು, ಬಹುಪಾಲು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಸತ್ತವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ, ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಮತ್ತು ಈ ದುರದೃಷ್ಟಕರ ಘಟನೆಯಲ್ಲಿ ಸಾವನ್ನಪ್ಪಿದವರ ಮರಣದ ಅವಶೇಷಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಹಿಂದಿರುಗಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸಲು ವಿದೇಶಾಂಗ ವ್ಯವಹಾರಗಳ ವಿದೇಶಾಂಗ ರಾಜ್ಯ ಖಾತೆ ಸಚಿವ ಸಿಂಗ್ ಅವರು ತುರ್ತಾಗಿ ಕುವೈತ್‌ಗೆ ಪ್ರಯಾಣಿಸುತ್ತಿದ್ದಾರೆ ಎಂದು "ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ನಲ್ಲಿ ಹೇಳಿದ್ದಾರೆ.
ಬೆಂಕಿಯ ಘಟನೆಯನ್ನು "ದುಃಖದಾಯಕ" ಎಂದು ಹೇಳಿರುವ ಮೋದಿ, ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.