ಆಸ್ಟ್ರೇಲಿಯಾದಲ್ಲಿ ಹೈದರಾಬಾದ್‌ ಮಹಿಳೆ ಹತ್ಯೆ
ಆಸ್ಟ್ರೇಲಿಯಾದಲ್ಲಿ ಹೈದರಾಬಾದ್‌ ಮಹಿಳೆ ಹತ್ಯೆ 
ವಿದೇಶ

ಆಸ್ಟ್ರೇಲಿಯಾದಲ್ಲಿ ಹೈದರಾಬಾದ್‌ ಮೂಲದ ಮಹಿಳೆಯ ಹತ್ಯೆ; ಕಸದ ಕವರ್ ನಲ್ಲಿ ಶವ ಪತ್ತೆ... ಪತಿ ಮೇಲೆ ಶಂಕೆ!

Srinivasamurthy VN

ಸಿಡ್ನಿ: ಹೈದರಾಬಾದ್‌ ಮೂಲದ ಮಹಿಳೆಯೊಬ್ಬರನ್ನು ಆಸ್ಟ್ರೇಲಿಯಾದಲ್ಲಿ ಹತ್ಯೆ ಮಾಡಲಾಗಿದ್ದು, ಆಕೆಯ ಶವವು ಡಸ್ಟ್‌ಬಿನ್‌ ಕವರ್ ನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಹೈದರಾಬಾದ್‌ ಮೂಲದ ಚೈತನ್ಯ ಮದಗಣಿ (Chaithanya Madhagani) ಎಂಬ 36 ವರ್ಷದ ಮಹಿಳೆಯ ಶವವು ಡಸ್ಟ್‌ಬಿನ್‌ನಲ್ಲಿ (Dustbin) ಪತ್ತೆಯಾಗಿದೆ. ಆಸ್ಟ್ರೇಲಿಯಾದ (Australia) ಬಕ್ಲೆಯಲ್ಲಿ (Buckley) ಮಾರ್ಚ್‌ 9ರಂದು ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪತಿ ಮೇಲೆ ಶಂಕೆ

ಆಸ್ಟ್ರೇಲಿಯಾದ ಪಾಯಿಂಟ್‌ ಕುಕ್‌ನಲ್ಲಿ ಚೈತನ್ಯ ಮದಗಣಿ ಹಾಗೂ ಅವರ ಪತಿ ಅಶೋಕ್‌ ರಾಜ್‌ ವಾರಿಕುಪ್ಪಳ ಅವರು ಮಗನೊಂದಿಗೆ ವಾಸಿಸುತ್ತಿದ್ದರು. ಅವರಿಗೆ ಆಸ್ಟ್ರೇಲಿಯಾದ ಪೌರತ್ವವೂ ಸಿಕ್ಕಿತ್ತು. ಪೊಲೀಸ್ ಮೂಲಗಳ ಪ್ರಕಾರ ಮಹಿಳೆ ಸಾವಿಗೆ ಮೇಲ್ನೋಟಕ್ಕೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲವಾದರೂ ಸಾವಿನ ಹಿಂದೆ ಆತನ ಪತಿಯ ಕೈವಾಡದ ಕುರಿತು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯ ಪತಿಯೇ ಕೊಂದು, ಆತ ಭಾರತಕ್ಕೆ ಬಂದಿದ್ದಾನೆ ಎಂದು ಶಂಕಿಸಲಾಗಿದೆ.

ಚೈತನ್ಯ ಕುಟುಂಬಸ್ಥರು ಆರೋಪಿಸಿರುವಂತೆ ಚೈತನ್ಯ ಮದಗಣಿಯನ್ನು ಕೊಲೆ ಮಾಡಿದ ಆಕೆಯ ಪತಿ ಅಶೋಕ್‌ ರಾಜ್‌, ಹೈದರಾಬಾದ್‌ಗೆ ವಾಪಸಾಗಿದ್ದಾನೆ. ಅಷ್ಟೇ ಅಲ್ಲ, ತಮ್ಮ ಮಗನನ್ನು ಚೈತನ್ಯ ಅವರ ತಂದೆ-ತಾಯಿಗೆ ಕೊಟ್ಟಿದ್ದಾನೆ. “ಕೊಲೆ ಮಾಡಿರುವುದನ್ನು ಅಳಿಯ ಒಪ್ಪಿದ್ದಾನೆ” ಎಂಬುದಾಗಿ ಚೈತನ್ಯ ಮದಗಣಿಯ ತಂದೆ-ತಾಯಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶಾಂಗ ಇಲಾಖೆಗೆ ಪತ್ರ

ಇನ್ನು ಕೊಲೆ ಸಂಬಂಧ ಉಪ್ಪಳ್‌ ಶಾಸಕ ಭಂಡಾರಿ ಲಕ್ಷ್ಮ ರೆಡ್ಡಿ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. “ಚೈತನ್ಯ ಮದಗಣಿ ಅವರು ನಮ್ಮ ಕ್ಷೇತ್ರದ ಮಹಿಳೆಯಾಗಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಹತ್ಯೆಗೀಡಾಗಿದ್ದು, ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ನೆರವು ನೀಡಬೇಕು” ಎಂಬುದಾಗಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. “ಮಹಿಳೆಯ ತಂದೆ-ತಾಯಿಯು ನನ್ನನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ, ಅಳಿಯನು ಕೊಲೆ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೈತನ್ಯ ಮದಗಣಿ ಅವರ ಶವವನ್ನು ಭಾರತಕ್ಕೆ ತರಲು ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಪತ್ರ ಬರೆದಿದ್ದೇನೆ ಎಂದು ಶಾಸಕ ತಿಳಿಸಿದ್ದಾರೆ.

SCROLL FOR NEXT