ಮುಜಫರಾಬಾದ್: ವಿದ್ಯುತ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ಉಂಟಾದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಗಳು ಭಾನುವಾರ ಹೇಳಿವೆ.
ಪಿಒಕೆ ಮತ್ತು ನಿರ್ಧಿಷ್ಟವಾಗಿ ಮುಜಫರಾಬಾದ್ ನಲ್ಲಿ ಸಂಪೂರ್ಣ ಶಟರ್ ಡೌನ್ ಮತ್ತು ವೀಲ್ ಜಾಮ್ ಮುಷ್ಕರದ ನಡುವೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಘರ್ಷಣೆ ನಡೆದಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೋಟ್ಲಿ ಮತ್ತು ಪೂಂಚ್ ಮೂಲಕ ಮುಜಫರಾಬಾದ್‌ವರೆಗೂ ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯನ್ನು ತಡೆಯಲು ಇಸ್ಲಾಂಘರ್ ಪಟ್ಟಣದಲ್ಲಿ ನಿಯೋಜಿಸಲಾಗಿದ್ದ ಸಬ್ ಇನ್‌ಸ್ಪೆಕ್ಟರ್ ಅದ್ನಾನ್ ಖುರೇಷಿ ಅವರ ಎದೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಎಂದು ಮೀರ್ ಪುರದ ಹಿರಿಯ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.