ಬ್ಯಾಂಕಾಕ್: ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಥಾಯ್ಲ್ಯಾಂಡ್ ನಲ್ಲಿ ಭೇಟಿ ಮಾಡಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಯೂನಸ್ ಗೆ ಬಾಂಗ್ಲಾ ಹಿಂದೂಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಕಠಿಣ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇದಷ್ಟೇ ಅಲ್ಲದೇ ಭಾರತ- ಬಾಂಗ್ಲಾ ನಡುವಿನ ಉತ್ತಮ ಸಂಬಂಧದ ಪರಿಸರವನ್ನು ಕಲುಷಿತಗೊಳಿಸುವ ಯಾವುದೇ ಹೇಳಿಕೆಗಳು, ಮಾತುಗಳನ್ನು ತಪ್ಪಿಸಲು ಮೋದಿ ಎಚ್ಚರಿಕೆ ನೀಡಿದ್ದರು.
ಈ ಬೆಳವಣಿಗೆಗಳ ವರದಿಯ ಬೆನ್ನಲ್ಲೇ ಮೊಹಮ್ಮದ್ ಯೂನಸ್ ಮೋದಿಗೆ ನೀಡಿದ ಉಡುಗೊರೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಾವು ಇರುವ ಹಳೆಯ ಚಿತ್ರವನ್ನು ಯೂನಸ್ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಜನವರಿ 3, 2015 ರಂದು ಮುಂಬೈನಲ್ಲಿ ನಡೆದ 102 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಯೂನಸ್ ಅವರನ್ನು ಗೌರವಿಸಲು ಚಿನ್ನದ ಪದಕವನ್ನು ನೀಡುತ್ತಿರುವ ಫೋಟೋ ಇದಾಗಿದೆ.
X ನಲ್ಲಿ ಪೋಸ್ಟ್ ಮಾಡಿರುವ ಯೂನಸ್, "ಶುಕ್ರವಾರ ಬ್ಯಾಂಕಾಕ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪ್ರಾಧ್ಯಾಪಕ ಮುಹಮ್ಮದ್ ಯೂನಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋಟೋವನ್ನು ನೀಡಿದ್ದಾರೆ. ಜನವರಿ 3, 2015 ರಂದು 102 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೊಫೆಸರ್ ಯೂನಸ್ ಅವರಿಗೆ ಚಿನ್ನದ ಪದಕವನ್ನು ನೀಡುತ್ತಿರುವ ಫೋಟೋ ಇದಾಗಿದೆ" ಎಂದು ಹೇಳಿದ್ದಾರೆ.
ಬ್ಯಾಂಕಾಕ್‌ನಲ್ಲಿ ನಡೆದ BIMSTEC ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ನಾಯಕರು ಭೇಟಿಯಾದರು, ಇದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಅವರ ಮೊದಲ ಮುಖಾಮುಖಿ ಸಭೆಯಾಗಿದೆ.