ವಾಷಿಂಗ್ಟನ್: ಟ್ರಂಪ್ ಆಡಳಿತವು ತನ್ನ ಪ್ರತಿ ಸುಂಕಗಳಿಂದ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ವಿನಾಯಿತಿ ನೀಡಿದೆ.
ಅಮೆರಿಕದ ಸುಂಕ ಮತ್ತು ಗಡಿ ಸಂರಕ್ಷಣಾ ಕಚೇರಿ ಶುಕ್ರವಾರ ತಡರಾತ್ರಿ ಹೊರಡಿಸಿದ ನೋಟಿಸ್ ನಲ್ಲಿ, ಚೀನಾದಿಂದ ಅಮೆರಿಕಕ್ಕೆ ಬರುವ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಸರಕುಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಚೀನಾದ ಸರಕುಗಳ ಮೇಲೆ ಅಮೆರಿಕ ಪ್ರಸ್ತುತ ಶೇ. 145 ರಷ್ಟು ಸುಂಕ ವಿಧಿಸಿರುವುದು ಟೀಕೆಗೆ ಕಾರಣವಾಗಿದೆ.
ಸೆಮಿಕಂಡಕ್ಟರ್ ಗಳಿಗೂ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅಮೆರಿಕದೊಂದಿಗೆ ಹೆಚ್ಚಿನ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲಿನ ಶೇ. 10 ರಷ್ಟು ಸುಂಕ ಹಾಗೂ ಚೀನಾದ ಮೇಲಿನ ಶೇ. 125 ರಷ್ಟು ಸುಂಕದಿಂದ ಸೆಮಿಕಂಡಕ್ಟರ್ ಗೆ ವಿನಾಯಿತಿ ನೀಡಲಾಗಿದೆ.
ಈ ಸರಕುಗಳ ಮೇಲೆ ಶೇ. 10 ರಷ್ಟು ಸುಂಕವನ್ನು ಇದೇ ತಿಂಗಳ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಅಲ್ಲದೇ ಚೀನಾದಿಂದ ಆಮದು ಆಗುವ ಸರಕುಗಳ ಮೇಲೆ ಹೆಚ್ಚಿನ ಸುಂಕ ಘೋಷಿಸಲಾಗಿತ್ತು.
ಪ್ರತಿಸುಂಕ ವಿಧಿಸಿದ ಚೀನಾ ಮೇಲೆ ಶೇ. 125 ರಷ್ಟು ಸುಂಕ ವಿಧಿಸಿದ್ದ ಅಮೆರಿಕಾ ಅದನ್ನು ಈಗ ಮತ್ತೆ ಏರಿಕೆ ಮಾಡಿದೆ. ಈ ಹಿಂದೆ ಶೇ. 20 ರಷ್ಟು ಆಮದು ಸುಂಕ ವಿಧಿಸಲಾಗಿದ್ದ ಚೀನಾದ ಅನೇಕ ಉತ್ಪನ್ನಗಳ ಮೇಲೆ ಒಟ್ಟಾರೇ ಶೇ. 145 ರಷ್ಟು ಆಮದು ಸುಂಕವನ್ನು ಅಮೆರಿಕ ವಿಧಿಸಿದೆ.
ಆದರೆ ಈಗ ವಿನಾಯಿತಿ ನೀಡಲಾಗಿರುವ ಹಾರ್ಡ್ ಡ್ರೈವ್‌ಗಳು ಮತ್ತು ಕಂಪ್ಯೂಟರ್ ಪ್ರೊಸೆಸರ್‌ಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಸಾಮಾನ್ಯವಾಗಿ ಅಮೆರಿಕಾದಲ್ಲಿ ತಯಾರಿಸಲ್ಲ.
ಈಗ ವಿಧಿಸಲಾಗುತ್ತಿರುವ ಸುಂಕದಿಂದ ಮತ್ತೆ ಅಮೆರಿಕದಲ್ಲಿಯೇ ಉತ್ಪಾದನೆ ಮಾಡುವ ಹಾದಿ ಎಂದು ಟ್ರಂಪ್ ಹೇಳುತ್ತಿದ್ದಾರೆ ಆದರೆ, ದೇಶೀಯವಾಗಿಯೇ ಉತ್ಪಾದನೆ ಹೆಚ್ಚಿಸಲು ಇನ್ನೂ ಹಲವು ವರ್ಷಗಳು ಬೇಕಾಗುತ್ತದೆ.