ನವದೆಹಲಿ: ಆಗಸ್ಟ್ 15 ರಂದು ಅಲಾಸ್ಕಾದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಶೃಂಗಸಭೆಯನ್ನು ಭಾರತ ಶನಿವಾರ ಸ್ವಾಗತಿಸಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಾಲಿ ಸಂಘರ್ಷವನ್ನು ಕೊನೆಗೊಳಿಸಲು ಈ ಸಭೆ ಸಹಾಯ ಮಾಡುತ್ತದೆ ಎಂದು ಆಶಿಸಿದೆ.
ಈ ಕುರಿತು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ಈ ಸಭೆಯು "ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಮತ್ತು ಶಾಂತಿಯ ನಿರೀಕ್ಷೆಗಳನ್ನು ತೆರೆಯುವ ಭರವಸೆಯನ್ನು ಭಾರತ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಹಲವಾರು ಸಂದರ್ಭಗಳಲ್ಲಿ ಹೇಳಿರುವಂತೆ, 'ಇದು ಯುದ್ಧದ ಯುಗವಲ್ಲ' ಆದ್ದರಿಂದ, ಭಾರತವು ಮುಂಬರುವ ಶೃಂಗಸಭೆ ಸಭೆಯನ್ನು ಅನುಮೋದಿಸುತ್ತದೆ ಮತ್ತು ಈ ಪ್ರಯತ್ನಗಳನ್ನು ಬೆಂಬಲಿಸಲು ಸಿದ್ಧವಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂದಹಾಗೆ 2021ರಲ್ಲಿ ಜಿನೀವಾದಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪುಟಿನ್ ಅವರನ್ನು ಭೇಟಿಯಾದ ನಂತರ ಅಧ್ಯಕ್ಷೀಯ ಮಟ್ಟದಲ್ಲಿ ನಡೆಯುತ್ತಿರುವ ಅಮೆರಿಕ-ರಷ್ಯಾ ಮೊದಲ ಸಭೆ ಇದಾಗಿದೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ಬಗ್ಗೆ ಶಾಂತಿ ಮಾತುಕತೆಗಳನ್ನು ಮುಂದಕ್ಕೆ ತರುವ ಗುರಿಯನ್ನು ಹೊಂದಿರುವ ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷರನ್ನು ಭೇಟಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ದೃಢಪಡಿಸಿದ್ದರು. ಶೃಂಗಸಭೆಗೂ ಮುನ್ನ, ಯಾವುದೇ ಶಾಂತಿ ಒಪ್ಪಂದವು "ಕೆಲವು ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು" ಒಳಗೊಂಡಿರಬಹುದು ಎಂದು ಟ್ರಂಪ್ ಸುಳಿವು ನೀಡಿದ್ದರು.
"ಯಾವುದೂ ಸುಲಭವಲ್ಲ.. ಆದರೆ ನಾವು ಕೆಲವನ್ನು ಮರಳಿ ಪಡೆಯುತ್ತೇವೆ. ನಾವು ಕೆಲವನ್ನು ಬದಲಾಯಿಸುತ್ತೇವೆ. ಎರಡು ರಾಷ್ಟ್ರಗಳ ಒಳಿತಿಗಾಗಿ ಕೆಲವು ಪ್ರದೇಶಗಳ ವಿನಿಮಯ ಇರುವ ಸಾಧ್ಯತೆ ಇದೆ ಎಂದು ಟ್ರಂಪ್ ಹೇಳಿದರು.
ಝೆಲೆನ್ಸ್ಕಿ ವಿರೋಧ
ಇನ್ನು ಉಕ್ರೇನ್ ಅನ್ನು ಮಾತುಕತೆಗಳಿಂದ ಹೊರಗಿಡುವ ಅಥವಾ ಪ್ರಾದೇಶಿಕ ರಿಯಾಯಿತಿಗಳನ್ನು ಸೂಚಿಸುವ ಯಾವುದೇ ಪ್ರಸ್ತಾಪವನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಲವಾಗಿ ವಿರೋಧಿಸಿದ್ದಾರೆ. "ಉಕ್ರೇನ್ ಇಲ್ಲದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಶಾಂತಿಗೆ ವಿರುದ್ಧವಾದ ನಿರ್ಧಾರಗಳಾಗಿವೆ. ಅವು ಏನನ್ನೂ ತರುವುದಿಲ್ಲ. ಇವು ಸತ್ತ ನಿರ್ಧಾರಗಳು. ಅವು ಎಂದಿಗೂ ಕೆಲಸ ಮಾಡುವುದಿಲ್ಲ" ಎಂದು ಝೆಲೆನ್ಸ್ಕಿ ಟೆಲಿಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.