ವಾಷಿಂಗ್ಟನ್: ಉಕ್ರೇನ್‌ನಲ್ಲಿ ಬಾಂಬ್ ದಾಳಿ ನಿಲ್ಲಿಸುವಂತೆ ರಷ್ಯಾವನ್ನು ಒತ್ತಾಯಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಭಾನುವಾರ ಹೇಳಿದ್ದಾರೆ.
ಎನ್‌ಬಿಸಿ ನ್ಯೂಸ್‌ನ 'ಮೀಟ್ ದಿ ಪ್ರೆಸ್' ನಲ್ಲಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವ್ಯಾನ್ಸ್ , ಅಮೆರಿಕದ ಕ್ರಮದಿಂದ ರಷ್ಯನ್ನರು ತಮ್ಮ ತೈಲ ಆರ್ಥಿಕತೆಯಿಂದ ಶ್ರೀಮಂತರಾಗಲು 'ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.
ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಿಸುವುದಕ್ಕಾಗಿ ಟ್ರಂಪ್ ಆಡಳಿತವು ಭಾರತವನ್ನು ಹೆಚ್ಚಾಗಿ ಟೀಕಿಸುತ್ತದೆ. ಆದರೆ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಆಮದುದಾರ ರಾಷ್ಟ್ರವಾದ ಚೀನಾವನ್ನು ಟೀಕಿಸುತ್ತಿಲ್ಲ.
ಇದೇ ತಿಂಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಟ್ರಂಪ್ ಅವರ ಭೇಟಿಯ ನಂತರ ನಡೆದ ಬೆಳವಣಿಗೆ ಹೊರತಾಗಿಯೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಮೆರಿಕ ಅಂತ್ಯಗೊಳಿಸಬಹುದೆಂಬ ವಿಶ್ವಾಸವನ್ನು ವ್ಯಾನ್ಸ್ ಹೊಂದಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಹೇಳಿದೆ.
"ಕಳೆದ ಕೆಲವು ವಾರಗಳಲ್ಲಿ ಉಭಯ ರಾಷ್ಟ್ರಗಳಿಂದ ಕೆಲವು ಮಹತ್ವದ ಪ್ರತಿಕ್ರಿಯೆಗಳನ್ನು ಕೇಳುತ್ತಿದ್ದೇವೆ. ರಷ್ಯನ್ನರು ತಮ್ಮ ತೈಲ ಆರ್ಥಿಕತೆಯಿಂದ ಶ್ರೀಮಂತರಾಗದಂತೆ ತಡೆಯಲು ಭಾರತದ ಮೇಲೆ ಹೆಚ್ಚುವರಿ ಸುಂಕದಂತಹ ಆರ್ಥಿಕ ಹತೋಟಿಯ ಕ್ರಮ ಕೈಗೊಳ್ಳಲಾಗಿದೆ ಎಂದು ವ್ಯಾನ್ಸ್ ತಿಳಿಸಿದರು.
ಹತ್ಯೆಯನ್ನು ನಿಲ್ಲಿಸಿದರೆ ರಷ್ಯಾವನ್ನು ವಿಶ್ವ ಆರ್ಥಿಕತೆಗೆ ಪುನಃ ಆಹ್ವಾನಿಸಲಾಗುತ್ತದೆ. ಇಲ್ಲದಿದ್ದರೆ ಅವರು ಪ್ರತ್ಯೇಕವಾಗಿ ಮುಂದುವರಿಯುತ್ತಾರೆ ಎಂದು ಅವರು ಹೇಳಿದ್ದಾರೆ.