ವಾಷಿಂಗ್ಟನ್: ಭಾರತ - ಪಾಕಿಸ್ತಾನ ಯುದ್ಧ ನಿಂತು ಹಲವು ತಿಂಗಳುಗಳು ಕಳೆದರೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ತನ್ನಿಂದ ಯುದ್ಧ ನಿಂತಿತು ಅನ್ನುವುದನ್ನು ಮಾತ್ರ ಬಿಡುವಂತೆ ಕಾಣುತ್ತಿಲ್ಲ. ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಛರಿಸಿದ್ದಾರೆ.
ಭಾರತಕ್ಕೆ ಅಮೆರಿಕಾ ತೆರಿಗೆ ಶಾಕ್ ನೀಡಿದೆ. ಭಾರತದಿಂದ ಅಮೆರಿಕಾಗೆ ರಫ್ತಾಗುವ ಸರಕುಗಳ ಮೇಲೆ ಟ್ರಂಪ್ ವಿಧಿಸಿರುವ ಶೇ.50ರಷ್ಟು ಸುಂಕ ನೀತಿಯು ಬುಧವಾರದಿಂದ (ಆಗಸ್ಟ್ 27) ಜಾರಿಗೆ ಬಂದಿದೆ. ಭಾರತದ ಸರಕುಗಳಿಗೆ ಶೇ.50 ಆಮದು ತೆರಿಗೆಯನ್ನು ಜಾರಿಗೆ ತರಲಾಗಿದೆ ಎಂದು ಅಮೆರಿಕಾ ಹೇಳಿದೆ.
ರಷ್ಯಾದೊಂದಿಗೆ ಇಂಧನ ಮತ್ತು ಶಸ್ತ್ರಾಸ್ತ್ರ ವ್ಯಾಪಾರ ವಹಿವಾಟು ನಡೆಸುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಶೇ.25 ಸುಂಕ ಮತ್ತು ಶೇ.25 ದಂಡ ಒಟ್ಟು ಶೇ.25 ತೆರಿಗೆ ವಿಧಿಸುವುದಾಗಿ ಟ್ರಂಪ್ ಆಗಸ್ಟ್ 6ರಂದು ಘೋಷಿಸಿದ್ದರು. ಅವರ ತೆರಿಗೆ ನೀತಿಯು ಇಂದಿನಿಂದ ಜಾರಿಗೆ ಬಂದಿದೆ.
ಈ ನಡುವೆ ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೆ. ನಿಮ್ಮ ಮತ್ತು ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದೆ. ಈ ವೇಳೆ ಪಾಕಿಸ್ತಾನದ ಜೊತೆಗೂ ಮಾತನಾಡಿದ್ದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ನಿರಂತರ ದ್ವೇಷ ಪ್ರಚೋದನೆಗೆ ಎಡೆಮಾಡಿಕೊಡಲಿದ್ದು, ವ್ಯಾಪಾರ ಒಪ್ಪಂದಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಉಭಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದೆ.
ನೀವಿಬ್ಬರೂ ಅಣುಬಾಂಬ್ ಯುದ್ಧ ನಡೆಸಲು ಸಜ್ಜಾಗುತ್ತಿದ್ದೀರಿ. ಯುದ್ಧದಲ್ಲಿ ಎರಡೂ ರಾಷ್ಟ್ರಗಳು ಅಂತ್ಯಗೊಳ್ಳಲಿದೆ. ಹೀಗಾಗಿ ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೂಡಲೇ ಕದನ ವಿರಾಮಕ್ಕೆ ಒಪ್ಪದಿದ್ದರೆ ನಿಮ್ಮ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದ್ದೆ. ಇದಾದ 5 ಗಂಟೆಗಳಲ್ಲಿ ಎಲ್ಲವೂ ಮುಗಿಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ 7 ಫೈಟರ್ ಜೆಟ್ ಗಳನ್ನು ಅಥವಾ ಅದಕ್ಕಿಂತಲೂ ಹೆಚ್ಚಿನ ಯುದ್ಧ ವಿಮಾನಗಳನ್ನು ನಾವು ಹೊರೆದುರುಳಿಸಿದ್ದೇವೆ. ಯುದ್ಧ ತಡೆಯಲು ವ್ಯಾಪಾರ ಒಪ್ಪಂದದ ಒತ್ತಡ ಹೇಲಲಾಗಿತ್ತು. ಕೊನೆಗೂ ಯುದ್ಧವನ್ನು ನಿಲ್ಲಿಸಿದೆವು ಎಂದ ಹೇಳಿದ್ದಾರೆ.