ನ್ಯೂಯಾರ್ಕ್/ ವಾಷಿಂಗ್ಟನ್: ಎಚ್-1ಬಿ ಹಾಗೂ ಎಚ್-4 ವೀಸಾಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಅಮೆರಿಕಾ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಯಾರ ಮಾತನ್ನು ಕೇಳದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿರುವ ಅಮೆರಿಕಾ, ಮುಕ್ತ ಭಾಷಣದ ಸೆನ್ಸಾರ್‌ಶಿಪ್‌ನಲ್ಲಿ ಭಾಗಿಯಾಗಿರುವ ಯಾರದ್ದೇ ಅರ್ಜಿಯನ್ನು ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಿಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಡಿಸೆಂಬರ್ 2 ರಂದು ಎಲ್ಲಾ ಯುಎಸ್ ಕಾರ್ಯಾಚರಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, "ಯುಎಸ್ ಕಾನ್ಸುಲರ್ ಅಧಿಕಾರಿಗಳಿಗೆ H-1B ಅರ್ಜಿದಾರರು ಮತ್ತು ಅವರೊಂದಿಗೆ ಪ್ರಯಾಣಿಸುವ ಕುಟುಂಬ ಸದಸ್ಯರ ರೆಸ್ಯೂಮ್‌ಗಳು ಅಥವಾ ಲಿಂಕ್ಡ್‌ಇನ್ ಪ್ರೊಫೈಲ್‌ಗಳನ್ನು ಪರಿಶೀಲಿಸಲು ಆದೇಶಿಸುತ್ತದೆ. ಅರ್ಜಿದಾರರು ತಪ್ಪು ಮಾಹಿತಿ, ಸತ್ಯ-ಪರಿಶೀಲನೆ, ಅನುಸರಣೆ ಮತ್ತು ಆನ್‌ಲೈನ್ ಸುರಕ್ಷತೆ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆಯೇ ಎಂಬುದು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಅರ್ಜಿದಾರನೊಬ್ಬ ಅಮೆರಿಕದಲ್ಲಿ ಸಂರಕ್ಷಿತ ಅಭಿವ್ಯಕ್ತಿಯ ಸೆನ್ಸಾರ್‌ಶಿಪ್‌ಗೆ ಜವಾಬ್ದಾರನಾಗಿದ್ದಾನೆ ಅಥವಾ ಅದರಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ನೀವು ಪುರಾವೆಗಳನ್ನು ಕಂಡುಕೊಂಡರೆ, ಅರ್ಜಿದಾರರು ಅನರ್ಹರು ಎಂಬ ತೀರ್ಮಾನವನ್ನು ನೀವು ಕೈಗೊಳ್ಳಬಹುದು. ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ನಿರ್ದಿಷ್ಟ ಲೇಖನದ ಅಡಿಯಲ್ಲಿ ನೀವು ಅರ್ಜಿಯನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿದ್ದೀರಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಮೂಲಕ ಕಠಿಣ ನಿಯಮ ಜಾರಿಗೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಎಲ್ಲಾ ಅರ್ಜಿದಾರರಿಗೆ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಸಾರ್ವಜನಿಕಗೊಳಿಸುವಂತೆ ಸೂಚಿಸಿದ್ದಾರೆ.
ಮೊದಲು, ವಿದ್ಯಾರ್ಥಿಗಳು ಮತ್ತು ಅಲ್ಪಾವಧಿಗೆ ಅಮೆರಿಕಕ್ಕೆ ಬರುವವರಿಗಷ್ಟೇ ಖಾತೆಗಳನ್ನು ಪಬ್ಲಿಕ್ ಮಾಡಲು ನಿರ್ದೇಶಿಸಲಾಗಿತ್ತು. ಈಗ ಅದನ್ನು ಎಚ್-1ಬಿ ಹಾಗೂ ಎಚ್-4 ವೀಸಾಗೂ ವಿಸ್ತರಿಸಲಾಗಿದೆ.
ಇದಕ್ಕೆ ಕಾರಣವನ್ನೂ ತಿಳಿಸಿರುವ ಅಮೆರಿಕ, 'ಅರ್ಜಿದಾರರು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಲ್ಲ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಸಾಮಾಜಿಕ ಮಾದ್ಯಮ ಖಾತೆ ಪರಿಶೀಲಿಸಲಾಗುವುದು. ಆ ಮೂಲಕ ವೀಸಾಗೆ ಅರ್ಹರೇ ಎಂಬುದನ್ನೂ ಪೋಸ್ಟ್ ಆಧಾರದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದೆ.
ಇದರೊಂದಿಗೆ ಅರ್ಜಿದಾರರು ಅಮೆರಿಕ ವಿರೋಧಿ ಮನಸ್ಥಿತಿ ಹೊಂದಿದ್ದಾರೆಯೇ? ಅಂಥವರನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು, ಪೋಸ್ಟ್, ಕಮೆಂಟ್‌ಗಳ ಆಧಾರದಲ್ಲಿ ಡಿಸೆಂಬರ್ 15ರಿಂದ ಪರಿಶೀಲಿಸುವ ಕೆಲಸವನ್ನು ಅಮೆರಿಕಾ ಸರ್ಕಾರ ಮಾಡಲು ಮುಂದಾಗಿದೆ.