ಕ್ಯಾನ್‌ಬೆರಾ: 2018 ರಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಬೀಚ್‌ನಲ್ಲಿ 24 ವರ್ಷದ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಟೊಯಾ ಕಾರ್ಡಿಂಗ್ಲಿ ಎಂಬುವವರನ್ನು ಕೊಂದ ಆರೋಪದಲ್ಲಿ ಮಾಜಿ ನರ್ಸ್ ರಾಜ್‌ವಿಂದರ್ ಸಿಂಗ್ (41) ಅವರನ್ನು ಕೈರ್ನ್ಸ್‌ನ ಸುಪ್ರೀಂ ಕೋರ್ಟ್ ಸೋಮವಾರ ತಪ್ಪಿತಸ್ಥರೆಂದು ಘೋಷಿಸಿದೆ ಎಂದು ಎಬಿಸಿ ನ್ಯೂಸ್ ಮಂಗಳವಾರ ವರದಿ ಮಾಡಿದೆ.
ಕೊಲೆಯ ಹಿಂದಿನ ಕಾರಣ ಏನೆಂಬುದು ತಿಳಿದಿಲ್ಲ ಎಂದಿರುವ ನ್ಯಾಯಮೂರ್ತಿ ಲಿಂಕನ್ ಕ್ರೌಲಿ, ಇದೊಂದು 'ಅವಕಾಶವಾದಿ ಕೊಲೆ' ಎಂದು ವಿವರಿಸಿದ್ದಾರೆ ಎಂದು ವರದಿ ತಿಳಿಸಿದೆ.
2018ರ ಅಕ್ಟೋಬರ್ 21 ರಂದು ಕೈರ್ನ್ಸ್‌ನ ಉತ್ತರದಲ್ಲಿರುವ ವಾಂಗೆಟ್ಟಿ ಬೀಚ್‌ನಲ್ಲಿ ತನ್ನ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಸಿಂಗ್ ಕಾರ್ಡಿಂಗ್ಲಿಯನ್ನು ಕೊಂದಿದ್ದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಮೃತ ಕಾರ್ಡಿಂಗ್ಲಿ ಪೋರ್ಟ್ ಡೌಗ್ಲಾಸ್‌ನಲ್ಲಿರುವ ಆರೋಗ್ಯ ಆಹಾರ ಮತ್ತು ಫಾರ್ಮಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪ್ರಾಣಿಗಳ ಆಶ್ರಯ ತಾಣದಲ್ಲಿ ಸ್ವಯಂಸೇವಕರಾಗಿಯೂ ಕೆಲಸ ಮಾಡುತ್ತಿದ್ದರು.
ಕೊಲೆಯ ನಂತರ ಸಿಂಗ್ ತಮ್ಮ ಪತ್ನಿ, ಮಕ್ಕಳು ಮತ್ತು ಪೋಷಕರನ್ನು ಆಸ್ಟ್ರೇಲಿಯಾದಲ್ಲಿಯೇ ಬಿಟ್ಟು ಭಾರತಕ್ಕೆ ತೆರಳಿದರು.
'ನಿಮ್ಮ ಹೆಂಡತಿ, ನಿಮ್ಮ ಹೆತ್ತವರು, ನಿಮ್ಮ ಮಕ್ಕಳಿಗೆ ಸರಿಯಾದ ವಿದಾಯ ಹೇಳದೆ ನೀವು ಹೊರಟುಹೋದಿರಿ. ಇದರಿಂದ ನಿಮ್ಮ ಕುಟುಂಬದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ ನಿಮ್ಮ ಸ್ವಂತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ನಿಮ್ಮ ಏಕೈಕ ಕಾಳಜಿ ಎಂದು ನೀವು ಪ್ರದರ್ಶಿಸಿದ್ದೀರಿ' ಎಂದು ನ್ಯಾಯಮೂರ್ತಿ ಕ್ರೌಲಿ ಹೇಳಿರುವುದಾಗಿ ಎಬಿಸಿ ನ್ಯೂಸ್ ಉಲ್ಲೇಖಿಸಿದೆ.
ಕಾರ್ಡಿಂಗ್ಲಿಯನ್ನು ಕೊಂದ ಏಳು ವರ್ಷಗಳ ನಂತರ ಸಿಂಗ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪೆರೋಲ್‌ಗೆ ಪರಿಗಣಿಸುವ ಮೊದಲು ಅವರು ಕನಿಷ್ಠ 25 ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕು.
ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಕ್ವೀನ್ಸ್‌ಲ್ಯಾಂಡ್ ಪೊಲೀಸರು 1 ಮಿಲಿಯನ್ ಆಸ್ಟ್ರೇಲಿಯಾ ಡಾಲರ್ ಬಹುಮಾನ ಘೋಷಿಸಿದ ನಂತರ ಎರಡು ವರ್ಷಗಳ ಹಿಂದೆ ಆತನನ್ನು ಭಾರತದಿಂದ ಗಡಿಪಾರು ಮಾಡಲಾಯಿತು ಎಂದು ವರದಿ ತಿಳಿಸಿದೆ.