ವಾಷಿಂಗ್ಟನ್: ಕಳೆದ ವರ್ಷ ಪ್ರಸಾರವಾದ ಸುದ್ದಿ ಸಾಕ್ಷ್ಯಚಿತ್ರವೊಂದರಲ್ಲಿ ತಮ್ಮ ಭಾಷಣವನ್ನು ಎಡಿಟ್ ಮಾಡಿ ಪ್ರಸಾರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಡುಗಿದ್ದು, 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
33 ಪುಟಗಳ ಮೊಕದ್ದಮೆಯಲ್ಲಿ ಟ್ರಂಪ್ ಅವರು, ಬಿಬಿಸಿ ಸುದ್ದಿ ವಿರುದ್ಧ ಕಿಡಿಕಾರಿದ್ದು, "ಸುಳ್ಳು, ಮಾನನಷ್ಟಕರ, ಮೋಸಗೊಳಿಸುವ, ಅವಹೇಳನಕಾರಿ, ಪ್ರಚೋದನಕಾರಿ ಮತ್ತು ದುರುದ್ದೇಶಪೂರಿತ ಚಿತ್ರಣವನ್ನು" ಪ್ರಸಾರ ಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನು "2024 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಪ್ರಭಾವ ಬೀರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಸಲುವಾಗಿ ಭಾಷಣವನ್ನು ಎಡಿಟ್ ಮಾಡಿ ಬಿಬಿಸಿ ಪ್ರಸಾರ ಮಾಡಿದೆ ಎಂದು ಹೇಳಿದ್ದಾರೆ.
ಆರೋಪ ಹಿನ್ನೆಲೆಯಲ್ಲಿ ಸಂಸ್ಥೆಯ ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಲ್ಲದೆ, ಭಾರತೀಯ ಮೂಲದ ಬಿಬಿಸಿ ಅಧ್ಯಕ್ಷ ಸಮೀರ್ ಶಾ ಕ್ಷಮೆಯಾಚಿಸಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಟ್ರಂಪ್ ಅವರನ್ನು ಕ್ಷಮೆಯಾಚಿಸಿತ್ತು.
ಇದೇ ವೇಳೆ, ಟ್ರಂಪ್ ಅವರ ಮಾನಹಾನಿ ಮಾಡಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು. ಈ ಮೂಲಕ, 1 ಶತಕೋಟಿ ಡಾಲರ್ (ಅಂದಾಜು ₹8,873 ಕೋಟಿ) ಪರಿಹಾರ ಕೋರುವ ಮಾನನಷ್ಟ ಮೊಕದ್ದಮೆ ಬೆದರಿಕೆಯನ್ನು ಅದು ತಳ್ಳಿಹಾಕಿತ್ತು.
ವೈಯಕ್ತಿಕವಾಗಿ ಶ್ವೇತಭವನಕ್ಕೆ ಪತ್ರ ಬರೆದಿದ್ದ ಬಿಬಿಸಿ ಮುಖ್ಯಸ್ಥ ಸಮೀರ್ ಶಾ ಅವರು, ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾನು ಮತ್ತು ಸಂಸ್ಥೆ ಕ್ಷಮೆಯಾಚಿಸುತ್ತೇವೆ’ ಎಂದು ತಿಳಿಸಿದ್ದರು.
ಟ್ರಂಪ್ ಅವರ ಭಾಷಣವಿರುವ ಸಾಕ್ಷ್ಯಚಿತ್ರವನ್ನು ಮರುಪ್ರಸಾರ ಮಾಡುವ ಯೋಜನೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದರು.
‘ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಅವರ ಎರಡು ಪ್ರತ್ಯೇಕ ಭಾಷಣದ ತುಣುಕುಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಅವರು ಏಕಕಾಲದಲ್ಲಿ ಮಾತನಾಡಿದಂತೆ ಎಡಿಟ್ ಮಾಡಲಾದ ಕಾರಣ, ಕ್ಯಾಪಿಟಲ್ ಗಲಭೆಗೆ ಅವರು ನೇರವಾಗಿ ಪ್ರಚೋದನೆ ನೀಡಿದಂತೆ ಅದು ಭಾಸವಾಗುತಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ತಿಳಿಸಿದ್ದರು.
ಆದರೆ, ಈ ಕ್ಷಮೆಯನ್ನು ನಿರಾಕರಿಸಿರುವ ಡೊನಾಲ್ಡ್ ಟ್ರಂಪ್ ಅವರು, ಇದೀಗ ಬಿಬಿಸಿ ವಿರುದ್ಧ 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.