ಪಶ್ಚಿಮ ಮೆಕ್ಸಿಕೋದಲ್ಲಿ ಹೊಸ ಲಘು ರೈಲು ಮಾರ್ಗದ ಉದ್ಘಾಟನೆಯ ಸಮಯದಲ್ಲಿ ಟ್ಲಾಜೊಮುಲ್ಕೊ ಡಿ ಜುನಿಗಾದ ಮೇಯರ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಲುಕಿಕೊಂಡು ಅವರು ಬರುವಷ್ಟರಲ್ಲಿ ರೈಲು ಹೊರಟು ಹೋದ ಘಟನೆ ನಡೆದಿದ್ದು ಇದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೊ ನೋಡಿದ ಅನೇಕ ನೆಟ್ಟಿಗರು ಭಾರತ ದೇಶದಲ್ಲಿ ಸಮಯಪಾಲನೆ, ಹೊಣೆಗಾರಿಕೆ ಮತ್ತು ವಿಐಪಿ ಸಂಸ್ಕೃತಿಯ ಬಗ್ಗೆ ಹೊಸ ಚರ್ಚೆಯನ್ನೇ ಹುಟ್ಟುಹಾಕಿದ್ದಾರೆ.
ನಡೆದ ಘಟನೆಯೇನು?
ಡಿಸೆಂಬರ್ 15 ರಂದು, ಅಧಿಕಾರಿಗಳು ಗ್ವಾಡಲಜರಾ ಮೆಟ್ರೋಪಾಲಿಟನ್ ಪ್ರದೇಶದ ಭಾಗವಾದ ಟ್ಲಾಜೊಮುಲ್ಕೊ ಡಿ ಜುನಿಗಾದಲ್ಲಿ ಲೈಟ್ ರೈಲ್ ಲೈನ್ 4 ನ್ನು ಔಪಚಾರಿಕವಾಗಿ ಉದ್ಘಾಟನೆ ಕಾರ್ಯಕ್ರಮವಿತ್ತು. ಮೊದಲ ರೈಲು ಸಂಚಾರಕ್ಕೆ ಚಾಲನೆ ನೀಡಲು ಮೇಯರ್ ಗೆರಾರ್ಡೊ ಕ್ವಿರಿನೊ ವೆಲಾಜ್ಕ್ವೆಜ್ ಚಾವೆಜ್ ಸಹಾಯಕರೊಂದಿಗೆ ಜಾಗಿಂಗ್ ಮಾಡುತ್ತಾ ಆಗಮಿಸುವ ಹೊತ್ತಿಗೆ ಸಮಯ ಮೀರಿ ಹೋಗಿತ್ತು.
ಕೆಲವೇ ಸೆಕೆಂಡುಗಳಲ್ಲಿ ರೈಲಿನ ಬಾಗಿಲುಗಳು ಮುಚ್ಚಲ್ಪಟ್ಟು ರೈಲು ಹೊರಟುಹೋಯಿತು, ಉದ್ಘಾಟನೆಗೆ ಆಗಮಿಸಿದ್ದ ಮೇಯರ್ ನ್ನು ಪ್ಲಾಟ್ ಫಾರ್ಮ್ ನಲ್ಲಿ ಬಿಟ್ಟು ರೈಲು ಹೊರಟುಹೋಗಿತ್ತು.
ಎಲ್ ಹೆರಾಲ್ಡೊ ಡಿ ಮೆಕ್ಸಿಕೋ ಪ್ರಕಾರ, ಹೊಸ ರೈಲು ಮಾರ್ಗವು 21 ಕಿಲೋಮೀಟರ್‌ಗಳನ್ನು ವ್ಯಾಪಿಸಿ, ಎಂಟು ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.
ಭಾರತದಲ್ಲಿ ಚರ್ಚೆಗೆ ನಾಂದಿ ಹಾಡಿದ ವಿಡಿಯೊ
ಈ ಕ್ಲಿಪ್ ನ್ನು 1.5 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ವೀಕ್ಷಿಸಿದ್ದು, ಭಾರತದಲ್ಲಿ, ಕಾರ್ಯಕ್ರಮಗಳಿಗೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳಿಗೆ ಗಂಟೆಗಟ್ಟಲೆ ಕಾಯುವ ಪ್ರಸಂಗಗಳು ಎದುರಾಗುತ್ತವೆ. ಭಾರತದಲ್ಲಿ ಇಂತಹ ಘಟನೆ ನಡೆಯುತ್ತಿದ್ದರೆ ರೈಲು ಚಾಲಕನನ್ನು ಬಂಧಿಸಲಾಗುತ್ತಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಸಾವಿರಾರು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಮೆಕ್ಸಿಕೋದ ಸಮಯಪಾಲನೆ ಮತ್ತು ವಿಐಪಿಗಳಿಗೆ ಪ್ರಾಮುಖ್ಯತೆ ನೀಡುವ ಭಾರತದ ಸಂಪ್ರದಾಯದ ನಡುವಿನ ತೀಕ್ಷ್ಣವಾದ ವ್ಯತ್ಯಾಸಗಳನ್ನು ತೋರಿಸಿದ್ದಾರೆ.
ಭಾರತದಲ್ಲಿ, ಸಚಿವರು ಉದ್ಘಾಟನೆಗೆ ತಡವಾದರೆ ರೈಲು ಗಂಟೆಗಟ್ಟಲೆ ಕಾಯುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು, ವಿಐಪಿಗಳು ಬರದಿದ್ದರೆ ಭಾರತದಲ್ಲಿ ಚಾಲಕ ಸಮಯಕ್ಕೆ ಸರಿಯಾಗಿ ಹೊರಡಲು ಧೈರ್ಯ ಮಾಡುತ್ತಾರಾ, ಒಂದು ವೇಳೆ ಹಾಗೆ ಹೋದರೆ ನೇರವಾಗಿ ಜೈಲಿಗೆ ಅಥವಾ ಸೇವೆಯಿಂದ ಅನಾನತು ಆಗುತ್ತಾರೆ ಎಂದು ಬರೆದಿದ್ದಾರೆ.
ವಿವಿಐಪಿ ಸಂಸ್ಕೃತಿ ಹೆಚ್ಚಾಗಿರುವ ಭಾರತದಲ್ಲಿ ಇಂತಹ ಘಟನೆಗಳು ನೋಡಲು ಸಿಗಲಿಕ್ಕಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳುತ್ತಾರೆ. ಮೆಕ್ಸಿಕೋದಲ್ಲಿ, ಮೇಯರ್ ತಡವಾದರೂ ರೈಲುಗಳು ಸಮಯಕ್ಕೆ ಸರಿಯಾಗಿ ಓಡುತ್ತವೆ. ಭಾರತದಲ್ಲಿ, ಸಚಿವರಿಗಾಗಿ ಕಾಯದಿದ್ದರೆ ಚಾಲಕರನ್ನು ಬಂಧಿಸಲಾಗುತ್ತದೆ. ಸಮಯಪಾಲನೆ ಮತ್ತು ವಿಐಪಿ ಸಂಸ್ಕೃತಿಯ ನಡುವಿನ ವ್ಯತ್ಯಾಸವಿದು ಎಂದು ಮತ್ತೊಬ್ಬರು ಹೇಳುತ್ತಾರೆ.