ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನಸಂದಣಿಯ ಮೇಲೆ ಟ್ರಕ್ ನುಗ್ಗಿದ್ದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಟ್ರಕ್ ಚಾಲಕನ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದು ಈ ಘಟನೆಯಿಂದ ಸ್ಥಳದಲ್ಲಿ ಆತಂಕ ಮನೆ ಮಾಡಿತ್ತು.
ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡು ಸಂಭ್ರಮಿಸುತ್ತಿದ್ದವರ ಮೇಲೆ ಶಂಕಿತ ಚಾಲಕನು ಉದ್ದೇಶಪೂರ್ವಕವಾಗಿ ಟ್ರಕ್ ಹರಿಸಿದ್ದಾನೆ. ಈ ಅಪಘಾತದಲ್ಲಿ 10 ಸಾವನ್ನಪ್ಪಿದ್ದಾರೆ. ಫ್ರೆಂಚ್ ಕ್ವಾರ್ಟರ್‌ನ ಹೃದಯಭಾಗದಲ್ಲಿರುವ ಬೌರ್ಬನ್ ಸ್ಟ್ರೀಟ್ ಮತ್ತು ಐಬರ್‌ವಿಲ್ಲೆ ಸ್ಟ್ರೀಟ್‌ನ ಛೇದಕದಲ್ಲಿ 2025ರ ಜನವರಿ 1ರ ಮುಂಜಾನೆ 3:15ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ನ್ಯೂ ಓರ್ಲಿಯನ್ಸ್ ಪೋಲೀಸ್ ಇಲಾಖೆಯು ಈ ದುರಂತ ಘಟನೆಯನ್ನು ದೃಢಪಡಿಸಿದೆ. ಶಂಕಿತನು ಜನರ ಮೇಲೆ ಟ್ರಕ್ ಹರಿಸಿದ್ದಲ್ಲದೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ. ಇನ್ನು ಗುಂಡೇಟಿನಿಂದ ಹೆಚ್ಚುವರಿ ಸಾವುನೋವುಗಳು ಅಥವಾ ಗಾಯಗಳು ಉಂಟಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಗಾಯಗಳ ಸಂಖ್ಯೆಯ ಬಗ್ಗೆ ಅಧಿಕಾರಿಗಳು ಇನ್ನೂ ವಿವರಗಳನ್ನು ನೀಡಬೇಕಾಗಿದೆ. ಆದರೆ ಪ್ರತ್ಯಕ್ಷದರ್ಶಿಗಳು ಭಯಾನಕ ಘಟನೆಯನ್ನು ವಿವರಿಸಿದ್ದಾರೆ.