ಲಾಹೋರ್: 30 ವರ್ಷದ ಭಾರತೀಯ ವ್ಯಕ್ತಿಯೊಬ್ಬ ತಾನು ಮದುವೆಯಾಗಲು ಬಯಸಿದ ಫೇಸ್‌ಬುಕ್ ಸ್ನೇಹಿತೆಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ್ದು, ಸದ್ಯ ಜೈಲು ಪಾಲಾಗಿದ್ದಾನೆ.
ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು ಎಂಬುವವರನ್ನು ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಯಲ್ಲಿ (ಲಾಹೋರ್‌ನಿಂದ ಸುಮಾರು 240 ಕಿಮೀ) ಅಕ್ರಮವಾಗಿ ಗಡಿ ದಾಟಿದ್ದಕ್ಕಾಗಿ ಬಂಧಿಸಲಾಯಿತು.
ಬಾಬು ತಾನು ಮದುವೆಯಾಗಲು ಬಯಸಿದ್ದ ಫೇಸ್‌ಬುಕ್ ಸ್ನೇಹಿತೆಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಲು ಮುಂದಾಗಿದ್ದ. ಬಾಬು ಅವರ ಫೇಸ್‌ಬುಕ್ ಸ್ನೇಹಿತೆ ಸನಾ ರಾಣಿ (21) ಎಂಬುವವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತಾನು ಆತನನ್ನು ಮದುವೆಯಾಗಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
'ಬಾಬು ಮತ್ತು ತಾನು ಕಳೆದ ಎರಡೂವರೆ ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದೇವೆ. ಆದರೆ, ಅವರನ್ನು ಮದುವೆಯಾಗಲು ತಾನು ಆಸಕ್ತಿ ಹೊಂದಿಲ್ಲ' ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸನಾ ರಾಣಿ ತಿಳಿಸಿರುವುದಾಗಿ ಪಂಜಾಬ್ ಪೊಲೀಸ್ ಅಧಿಕಾರಿ ನಾಸಿರ್ ಶಾ ಗುರುವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಾಬು ಅಕ್ರಮವಾಗಿ ಗಡಿ ದಾಟಿ ಮಂಡಿ ಬಹೌದ್ದೀನ್‌ನಲ್ಲಿರುವ ಸನಾ ರಾಣಿಯ ಮಾಂಗ್ ಗ್ರಾಮವನ್ನು ತಲುಪಿದ್ದಾನೆ. ಅಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು.
ಬಾಬು, ಸನಾ ರಾಣಿಯನ್ನು ಭೇಟಿಯಾದರೇ ಎಂದು ಕೇಳಿದಾಗ, ಇದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಒತ್ತಡಕ್ಕೆ ಮಣಿದು ಬಾಬು ಅವರನ್ನು ಮದುವೆಯಾಗಲು ನಿರಾಕರಿಸಿ ರಾಣಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆಯೇ ಎಂಬುದೂ ದೃಢಪಟ್ಟಿಲ್ಲ. ಆದಾಗ್ಯೂ, ಗುಪ್ತಚರ ಸಂಸ್ಥೆಯ ಅಧಿಕಾರಿಗಳು ರಾಣಿ ಮತ್ತು ಆಕೆಯ ಕುಟುಂಬದ ಇತರ ಸದಸ್ಯರನ್ನು ಬಾಬು ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.
ಬಂಧನದ ನಂತರ, ಬಾಬು ತನ್ನ ಪ್ರೇಮ ಕಥೆಯನ್ನು ಪೊಲೀಸರಿಗೆ ವಿವರಿಸಿದ್ದಾನೆ. ಯಾವುದೇ ಕಾನೂನು ದಾಖಲೆಗಳಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ ಬಾಬು ಅವರನ್ನು ಪಾಕಿಸ್ತಾನದ ವಿದೇಶಿ ಕಾಯಿದೆ ಸೆಕ್ಷನ್ 13 ಮತ್ತು 14 ರ ಅಡಿಯಲ್ಲಿ ಬಂಧಿಸಲಾಯಿತು. ನಂತರ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮುಂದಿನ ವಿಚಾರಣೆ ಜನವರಿ 10 ರಂದು ನಡೆಯಲಿದೆ.
ಈ ಹಿಂದೆ ಅಂಜು ಎಂಬ ಭಾರತೀಯ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಆಕೆ ಇಸ್ಲಾಂಗೆ ಮತಾಂತರಗೊಂಡಳು ಮತ್ತು ಪಾಕಿಸ್ತಾನಿ ವ್ಯಕ್ತಿ ನಸ್ರುಲ್ಲಾನನ್ನು ಮದುವೆಯಾದಳು.
ಕಳೆದ ವರ್ಷ, ಪಾಕಿಸ್ತಾನದ ಸೀಮಾ ಹೈದರ್ ಎಂಬ ಮಹಿಳೆ PUBG ಗೇಮ್ ಮೂಲಕ ಭಾರತೀಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದರು. ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದಳು ಮತ್ತು ನಂತರ ಆತನನ್ನು ಮದುವೆಯಾದಳು.
ಅದೇ ರೀತಿ, ಕಳೆದ ವರ್ಷ 19 ವರ್ಷದ ಪಾಕಿಸ್ತಾನಿ ಹುಡುಗಿ ಇಕ್ರಾ ಜಿವಾನಿ ಎಂಬುವವರು 25 ವರ್ಷದ ಭಾರತೀಯ ಪ್ರಜೆ ಮುಲಾಯಂ ಸಿಂಗ್ ಯಾದವ್ ಜೊತೆ ಆನ್‌ಲೈನ್ ಗೇಮ್ ಮೂಲಕ ಸ್ನೇಹ ಬೆಳೆಸಿದ್ದಳು. ಇಕ್ರಾ ಮತ್ತು ಮುಲಾಯಂ ನಂತರ ನೇಪಾಳದಲ್ಲಿ ವಿವಾಹವಾದರು.