ಅಕ್ರಾ: ಘಾನಾ ದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಅಲ್ಲಿನ ಸಂಸತ್ ಭವನದಲ್ಲಿ ಭಾಷಣ ಮಾಡಿದ್ದು ಈ ವೇಳೆ ಘಾನಾ ಜನಪ್ರತಿನಿಧಿಗಳು ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ‍್ರಧಾನಿ ಮೋದಿ ಇಂದು ಮೊದಲಿಗೆ ಘಾನಾಕ್ಕೆ ಬಂದಿಳಿದರು. ಇದಾದ ಕೆಲವು ಗಂಟೆಗಳಲ್ಲಿ ಉಭಯ ರಾಷ್ಟ್ರಗಳ ನಿಯೋಗವು ಮಾತುಕತೆ ನಡೆಸಿತು.
ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಅವರೇ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡು, ಸ್ವಾಗತಿಸಿದರು. ಆ ಮೂಲಕ ಕಳೆದ ಮೂರು ದಶಕಗಳಲ್ಲಿ ಇಲ್ಲಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಇವರಾಗಿದ್ದಾರೆ.
ಉಭಯ ನಾಯಕರ ಜೊತೆಗೆ ಮಾತುಕತೆ ನಡೆದ ಬಳಿಕ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಸಂಬಂಧಿಸಿದ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಘಾನಾ ಸಂಸತ್ ನಲ್ಲಿ ಪ್ರಧಾನಿ ಮೋದಿ ಅದ್ಧೂರಿ ಸ್ವಾಗತ
ಇನ್ನು ಘಾನಾ ರಾಜಧಾನಿ ಅಕ್ರಾದಲ್ಲಿ ಘಾನಾ ಸಂಸತ್ ನಲ್ಲಿ ಪ್ರಧಾನಿ ಮೋದಿ ಅವರ ಭಾಷಣವು ಒಂದು ಐತಿಹಾಸಿಕ ಕ್ಷಣವನ್ನು ಗುರುತಿಸಿತು. ಮೂರು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಘಾನಾಗೆ ನೀಡಿದ ಮೊದಲ ಭೇಟಿ ಮತ್ತು ಘಾನಾ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಭಾರತೀಯ ನಾಯಕರೊಬ್ಬರು ಮಾಡಿದ ಮೊದಲ ಭಾಷಣವಾಗಿತ್ತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಮತ್ತು ಉಭಯ ದೇಶಗಳ ಒಗ್ಗಟ್ಟಿನ ಸಂಕೇತವಾಗಿ, ಕೆಲವು ಘಾನಾದ ಸಂಸದರು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸಿ ಅಧಿವೇಶನಕ್ಕೆ ಹಾಜರಾಗಿದ್ದರು. ಈ ಕುರಿತ ವಿಡಿಯೋವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಘಾನಾ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ ಮಾಡುತ್ತಿದ್ದಾಗ, ಸಂಸತ್ತಿನ ಇಬ್ಬರು ಸದಸ್ಯರು (ಸಂಸದರು) ಭಾರತ ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಿಸಲು ಭಾರತೀಯ ಉಡುಪನ್ನು ಧರಿಸಿದ್ದರು. ಘಾನಾ ಸಂಸತ್ತಿನ ಪ್ರಸ್ತುತ ಸ್ಪೀಕರ್ ಅಲ್ಬನ್ ಸುಮನಾ ಕಿಂಗ್ಸ್‌ಫೋರ್ಡ್ ಬಾಗ್ಬಿನ್ ಅವರು ಮೋದಿಯವರ ಭಾಷಣದ ನಂತರ ತಮ್ಮ ಸಮಾರೋಪ ಭಾಷಣ ಮಾಡುತ್ತಿದ್ದಾಗ, ಇಬ್ಬರು ಘಾನಾದ ಸಂಸದರು ಭಾರತೀಯ ಉಡುಪನ್ನು ಧರಿಸಿರುವುದನ್ನು ಗಮನಿಸಿದರು.
ಒಬ್ಬ ಸಂಸದರು 'ಪಗ್ಡಿ' ಅಥವಾ ಸಾಂಪ್ರದಾಯಿಕ ಶಿರಸ್ತ್ರಾಣ ಮತ್ತು 'ಬಂಧ್‌ಗಲಾ' ನಲ್ಲಿ ಕಾಣಿಸಿಕೊಂಡರು, ಮತ್ತೋರ್ವ ಮಹಿಳಾ ಸಂಸದೆ ತಮ್ಮ ಭಾರತೀಯ ಉಡುಪನ್ನು ಪ್ರದರ್ಶಿಸಲು ಎದ್ದು ನಿಂತರು. ಇದನ್ನು ಗಮನಿಸಿದ ಸಂಸತ್ತಿನ ಇತರ ಸದಸ್ಯರು ಮತ್ತು ನರೇಂದ್ರ ಮೋದಿ ಚಪ್ಪಾಳೆ ತಟ್ಟಿದರು.
ಇದೇ ವಿಚಾರವಾಗಿ ಮಾತನಾಡಿದ ಘಾನಾ ಸಂಸತ್ ಸ್ಪೀಕರ್ ಅಲ್ಬನ್ ಬಾಗ್ಬಿನ್, 'ಭಾರತ, ಅದರ ಜನರು ಮತ್ತು ಅವರ ಸಂಸ್ಕೃತಿಯ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಸಹ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ' ಎಂದರು.
ಸ್ವತಃ ಘಾನಾ ಪ್ರಧಾನಿ ಅಕ್ರಾದಲ್ಲಿ ಪ್ರಧಾನಿ ಮೋದಿ ಅವರ ಅದ್ದೂರಿ ಸ್ವಾಗತಕ್ಕೆ ಬಂದರು. ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ವಿಮಾನ ನಿಲ್ದಾಣಕ್ಕೆ ಬಂದು ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡರು. ಎರಡು ದಿನಗಳ ಘಾನಾ ಪ್ರವಾಸ ಮುಗಿಸಿದ ಮೋದಿ ಅವರು ಗುರುವಾರ ರಾತ್ರಿ ಟ್ರಿನಿಡಾಡ್, ಟೊಬಾಗೊ ಪ್ರವಾಸಕ್ಕೆ ತೆರಳಿದರು.