ವಾಷಿಂಗ್ಟನ್: ಬ್ರಿಕ್ಸ್ ನ್ನು ಅಮೆರಿಕಕ್ಕೆ ಹಾನಿ ಮಾಡಲು ಮತ್ತು ಯುಎಸ್ ಡಾಲರ್ ನ್ನು ನಾಶಪಡಿಸಲು ಸ್ಥಾಪನೆ ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಶೇಕಡಾ 10 ರಷ್ಟು ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ನಡೆದ ಆರನೇ ಸಂಪುಟ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಬ್ರಿಕ್ಸ್ ನಲ್ಲಿರುವ ಸದಸ್ಯ ರಾಷ್ಟ್ರಗಳು ಶೇಕಡಾ 10 ರಷ್ಟು ಪಾವತಿ ಮಾಡಬೇಕಾಗುತ್ತದೆ ಎಂದರು.
ನಮಗೆ ನೋವುಂಟು ಮಾಡಲು ಮತ್ತು ನಮ್ಮ ಡಾಲರ್ ನ್ನು ಕುಗ್ಗಿಸಲು ಮತ್ತು ಡಾಲರ್ ನ್ನು ಮಾನದಂಡದಿಂದ ತೆಗೆದುಹಾಕಲು ಬ್ರಿಕ್ಸ್ ಸ್ಥಾಪಿಸಲಾಗಿದೆ. ನಮ್ಮ ಜೊತೆ ಆಟವಾಡಲು ನೋಡುತ್ತಿದ್ದರೆ ಪರವಾಗಿಲ್ಲ, ಆದರೆ ನಾನು ಕೂಡ ಆಟ ಆಡುತ್ತೇನೆ, ಬ್ರಿಕ್ಸ್ ರಾಷ್ಟ್ರಗಳಿಗೆ ನಮ್ಮ ಸರ್ಕಾರ ಶೇಕಡಾ 10ರಷ್ಟು ತೆರಿಗೆ ವಿಧಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ರಿಕ್ಸ್ ಒಂದು ಗಂಭೀರ ಬೆದರಿಕೆ, ಆದರೆ ಅವರು ಮಾಡಲು ಪ್ರಯತ್ನಿಸುತ್ತಿರುವುದು ಡಾಲರ್ ನ್ನು ನಾಶಮಾಡುವುದು, ಇದರಿಂದ ಮತ್ತೊಂದು ದೇಶವು ಸ್ವಾಧೀನಪಡಿಸಿಕೊಂಡು ಮಾನದಂಡವಾಗಬಹುದು, ನಾವು ಯಾವುದೇ ಸಮಯದಲ್ಲಿ ಮಾನದಂಡವನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ನಾವು ವಿಶ್ವ ಗುಣಮಟ್ಟದ ಡಾಲರ್ ನ್ನು ಕಳೆದುಕೊಂಡರೆ, ಅದು ಯುದ್ಧವನ್ನು ಕಳೆದುಕೊಂಡಂತೆ, ಒಂದು ಪ್ರಮುಖ ವಿಶ್ವ ಯುದ್ಧ; ನಾವು ಡಾಲರ್ ರಾಜ, ನಾವು ಅದನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಇಥಿಯೋಪಿಯಾ, ಇಂಡೋನೇಷ್ಯಾ ಮತ್ತು ಇರಾನ್ ನಾಯಕರು ಜುಲೈ 6-7 ರಂದು 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರೆಜಿಲ್ ನಲ್ಲಿ ಭಾಗವಹಿಸಿದ್ದರು.