ಇಸ್ಲಾಮಾಬಾದ್: ಪಾಕಿಸ್ತಾನ ತಾನು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೂ ತನ್ನ ಬಳಿ ಇರುವ ಶಾಹೀನ್ ಕ್ಷಿಪಣಿ ತೋರಿಸಿ ಜಗತ್ತಿಗೆ ಎದುರಿಸುತ್ತಿತ್ತು. ಆದರೆ ವರದಿಯ ಪ್ರಕಾರ, ಪಾಕಿಸ್ತಾನ ಸೇನೆಯ ಶಾಹೀನ್ -3 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ. ಜುಲೈ 22ರಂದು ಪಾಕಿಸ್ತಾನ ಶಾಹೀನ್ 3 ಕ್ಷಿಪಣಿ ಪರೀಕ್ಷೆ ನಡೆಸಿದ್ದು ಅದು ಬಲೂಚಿಸ್ತಾನ್‌ನಲ್ಲಿ ಬಿದ್ದಿದೆ. ಈ ಕ್ಷಿಪಣಿ ನಿಯಂತ್ರಣ ತಪ್ಪಿ ಗುರಿ ತಪ್ಪಿದೆ.
ವರದಿಯ ಪ್ರಕಾರ, ಈ ಕ್ಷಿಪಣಿಯನ್ನು ಪಾಕಿಸ್ತಾನದ ಪಂಜಾಬ್‌ನ ಡೇರಾ ಘಾಜಿ ಖಾನ್‌ನಿಂದ ಹಾರಿಸಲಾಯಿತು. ಆದರೆ ಉಡಾವಣೆಯಾದ ನಂತರ, ಅದು ತನ್ನ ನಿರ್ದಿಷ್ಠ ಗುರಿಯಿಂದ ದಾರಿ ತಪ್ಪಿ ಬಲೂಚಿಸ್ತಾನದ ಗ್ರಾಪನ್ ಪಾಸ್‌ನಲ್ಲಿರುವ ಲೂಪ್ ಸೆಹ್ರಾನಿ ಲೆವೀಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿ ಬಿದ್ದಿದೆ. ಶಾಹೀನ್ -3 ಕ್ಷಿಪಣಿ ವಿಫಲವಾಗಿದೆ ಎಂದು ಸ್ಥಳೀಯ ಬಲೂಚ್ ನಾಗರಿಕರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಷಿಪಣಿ ನಾಗರಿಕ ಪ್ರದೇಶದಲ್ಲಿ ಇನ್ನೂ ಕೆಲವು ಮೀಟರ್‌ಗಳಷ್ಟು ಬಿದ್ದಿದ್ದರೆ, ದೊಡ್ಡ ಅಪಘಾತ ಸಂಭವಿಸಬಹುದಿತ್ತು ಮತ್ತು ಅನೇಕ ನಾಗರಿಕರು ಪ್ರಾಣ ಕಳೆದುಕೊಳ್ಳಬಹುದಿತ್ತು ಎಂದು ಬಲೂಚ್‌ಗಳು ಹೇಳಿದ್ದಾರೆ.
ಪಾಕಿಸ್ತಾನ ಸೇನೆಯನ್ನು ತೀವ್ರವಾಗಿ ಖಂಡಿಸಿ ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಹೇಳಿಕೆ ನೀಡಿದ್ದಾರೆ. ಈ ಪರೀಕ್ಷೆಯನ್ನು ಅವರು ಬಲೂಚಿಸ್ತಾನದ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ನಾಗರಿಕ ಭದ್ರತೆಯ ಉಲ್ಲಂಘನೆ ಎಂದು ಕರೆದಿದ್ದಾರೆ. ಬಲೂಚ್ ಗಣರಾಜ್ಯವು ಇದನ್ನು "ಮಿಲಿಟರಿ ಹಸ್ತಕ್ಷೇಪದ ಹೆಸರಿನಲ್ಲಿ ಯೋಜಿತ ಸ್ಥಳಾಂತರ ಮತ್ತು ಖನಿಜ ಸಂಪನ್ಮೂಲಗಳ ಲೂಟಿ" ಎಂದು ಕರೆದಿದೆ ಎಂದು ಅವರು ಹೇಳಿದ್ದಾರೆ. "ಬಲೂಚಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಮತ್ತು ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗಳ ಪುನರಾವರ್ತಿತ ವೈಫಲ್ಯವನ್ನು ಬಲೂಚಿಸ್ತಾನ್ ಗಣರಾಜ್ಯ ಬಲವಾಗಿ ಖಂಡಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಈ ಹಿಂದೆ ನಡೆಸಿದ್ದ ಕೆಲ ಪರೀಕ್ಷೆಗಳು ವಿಫಲವಾಗಿದ್ದವು. ಅಕ್ಟೋಬರ್ 2023ರಲ್ಲಿ ಪಂಜಾಬ್‌ನಿಂದ ಕ್ಷಿಪಣಿಯನ್ನು ಹಾರಿಸಲಾಯಿತು. ಇದು ಡೇರಾ ಬುಗ್ಟಿ ಬಳಿಯ ಪರಮಾಣು ಸೌಲಭ್ಯದ ಹತ್ತಿರ ಬಿದ್ದಿತು. ಅದು ಜನನಿಬಿಡ ಪ್ರದೇಶದಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಬಿದ್ದಿತು. ಇದು ವಿನಾಶಕ್ಕೆ ಕಾರಣವಾಗಬಹುದಿತ್ತು. ಮೇ 1998ರ ಆರಂಭದಲ್ಲಿ ಪಾಕಿಸ್ತಾನವು ಬಲೂಚಿಸ್ತಾನದ ಅನುಮತಿಯಿಲ್ಲದೆ ಚಗೈ ಜಿಲ್ಲೆಯಲ್ಲಿ ತನ್ನ 6 ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಇದರ ಪರಿಣಾಮವು ಇನ್ನೂ ಈ ಪ್ರದೇಶದಲ್ಲಿ ಕಂಡುಬರುತ್ತಿದೆ. ಆ ಪ್ರದೇಶದ ಜನರು ಇನ್ನೂ ಕ್ಯಾನ್ಸರ್, ಚರ್ಮ ರೋಗದಿಂದ ಬಳಲುತ್ತಿದ್ದಾರೆ. ಇವುಗಳು ನಡೆಯುತ್ತಲೇ ಇವೆ. ಇದರ ಹೊರತಾಗಿ, ಇಡೀ ಪ್ರದೇಶದ ನೀರು ಕಲುಷಿತಗೊಂಡಿದೆ.