ವಾಷಿಂಗ್ಟನ್: ನ್ಯೂಯಾರ್ಕ್‌ನ ಕೇಂದ್ರ ಮ್ಯಾನ್‌ಹ್ಯಾಟನ್‌ನಲ್ಲಿ ಸೋಮವಾರ (ಜು.28) (ಸ್ಥಳೀಯ ಸಮಯ) ನಡೆದ ಗುಂಡಿನ ದಾಳಿಯಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅಧಿಕಾರಿ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯನ್ನು ದಿದರುಲ್ ಇಸ್ಲಾಂ (36) ಎಂದು ಗುರ್ತಿಸಲಾಗಿದೆ. ಇವರು ಬಾಂಗ್ಲಾದೇಶದಿಂದ ವಲಸೆ ಬಂದವರಾಗಿದ್ದು, ನ್ಯೂಯಾರ್ಕ್ ನಗರದಲ್ಲಿ 3 1/2 ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ತಿಳಿಸಿದ್ದಾರೆ.
ಇನ್ನು ದಾಳಿಕೋರನನ್ನು ಲಾಸ್ ವೇಗಾಸ್‌ನ 27 ವರ್ಷದ ಶೇನ್ ಟಮುರಾ ಎಂದು ಗುರುತಿಸಲಾಗಿದ್ದು, ಗುುಂಡಿನ ದಾಳಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
ಶಂಕಿತ ಶೂಟರ್ ಮೊದಲು ಸಂಜೆ 6:40 ರ ಸುಮಾರಿಗೆ 345 ಪಾರ್ಕ್ ಅವೆನ್ಯೂದ ಲಾಬಿಯಲ್ಲಿ NYPD ಅಧಿಕಾರಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ. ನಂತರ ಅವನು 33 ನೇ ಮಹಡಿಗೆ ಹೋಗಿ, ಕಚೇರಿ ಗೋಪುರದೊಳಗೆ ಕಟ್ಟಡದ 32 ನೇ ಮಹಡಿಯಲ್ಲಿ, ಲಾಕ್ ಮಾಡಿಕೊಂಡ. ಬಳಿಕ ಆತ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು, ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ತಿಳಿದುಬಂದಿದೆ.
ಈ ಘಟನೆಯ ನಂತರ, ಎಫ್‌ಬಿಐ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಫ್‌ಬಿಐ ಉಪನಿರ್ದೇಶಕ ಡ್ಯಾನ್ ಬೊಂಜಿನೊ ಅವರು ತಮ್ಮ ತಂಡವು ಸಕ್ರಿಯ ಅಪರಾಧ ಸ್ಥಳದಲ್ಲಿ ಬೆಂಬಲ ನೀಡುತ್ತಿದೆ ಎಂದು ಎಕ್ಸ್‌ಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ಆರೋಪಿಯ ಉದ್ದೇಶವೇನು ಮತ್ತು ಅವನು ಒಬ್ಬಂಟಿಯಾಗಿದ್ದನೇ ಅಥವಾ ಯಾವುದೇ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.