ಸನಾ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಿಮಿಷ ಪ್ರಿಯಾಗೆ ಅಧಿಕೃತವಾಗಿ ಶಿಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿಯ ಹೇಳಿಕೆ ಖಚಿತಪಡಿಸಿದೆ.
ತಿಂಗಳುಗಳ ಕಾಲ ಉನ್ನತ ಮಟ್ಟದ ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಯೆಮೆನ್‌ನ ರಾಜಧಾನಿ ಸನಾದಲ್ಲಿ ನಡೆದ ಕೊನೆಯ ಕ್ಷಣದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದ್ದು, ಈ ಹಿಂದೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿಯು, ಜು.16ಕ್ಕೆ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಈ ಹಿಂದೆ ತಾತ್ಕಾಲಿಕವಾಗಿ ಮುಂದೂಡಿದ್ದ ಮರಣದಂಡನೆಯನ್ನು ಇದೀಗ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಆದಾಗ್ಯೂ, ಯೆಮೆನ್ ಸರ್ಕಾರದಿಂದ ಅಧಿಕೃತ ಲಿಖಿತ ದೃಢೀಕರಣ ಇನ್ನೂ ಬಂದಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಬೆಳವಣಿಗೆಯನ್ನು ಇನ್ನೂ ಖಚಿತಪಡಿಸಿಲ್ಲ.
ನಿಮಿಷಾ ಅವರ ಮರಣದಂಡನೆಯನ್ನು ಮೊದಲು ಜುಲೈ 16 ರಂದು ನಿಗದಿಪಡಿಸಲಾಗಿತ್ತು. ಆದರೆ ಗ್ರ್ಯಾಂಡ್ ಮುಫ್ತಿ ಮುಸ್ಲಿಯಾರ್ ಅವರು ಯೆಮೆನ್ ಅಧಿಕಾರಿಗಳಿಗೆ ಕ್ಷಮಾದಾನ ನೀಡುವಂತೆ ಒತ್ತಾಯಿಸಿ ನೇರ ಮನವಿ ಮಾಡಿದ ನಂತರ ಕೇವಲ ಒಂದು ದಿನದ ಮೊದಲು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ನಿನ್ನೆಯಷ್ಟೇ (ಜು.28) ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾಳ ಪುತ್ರಿ ಮಿಶೆಲ್ (13), ತನ್ನ ತಾಯಿಯ ಬಿಡುಗಡೆಗಾಗಿ ಯೆಮೆನ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಳು.
ಖುದ್ದಾಗಿ ಯೆಮೆನ್‌ಗೆ ಆಗಮಿಸಿದ ನಿಮಿಷಾ ಪುತ್ರಿ ಮಿಶೆಲ್ಸ ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ ವಿನಂತಿಸಿಕೊಂಡಳು.
ತನ್ನ ತಂದೆ ಟಾಮಿ ಥಾಮಸ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕರಾದ ಡಾ. ಕೆ.ಎ. ಪಾಲ್ ಅವರೊಂದಿಗೆ, ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ತನ್ನ ತಾಯಿಯ ಪರವಾಗಿ ಮಿಶೆಲ್ ಅಂಗಲಾಚಿ ಬೇಡಿಕೊಂಡಳು.
ಹಲವಾರು ವರ್ಷಗಳಿಂದ ಯೆಮೆನ್‌ನಲ್ಲಿ ಜೈಲಿನಲ್ಲೇ ಉಳಿದಿರುವ ತನ್ನ ತಾಯಿಯನ್ನು ನೋಡದ ಮಿಶೆಲ್, 10 ವರ್ಷಗಳಿಂದ ನಾನು ನಿನ್ನ ಮುಖ ಸಹ ನೋಡಿಲ್ಲ. ನಿನ್ನನ್ನು ತುಂಬ ಪ್ರೀತಿಸುತ್ತೀನಿ ಅಮ್ಮ. ದಯವಿಟ್ಟು ನನ್ನ ತಾಯಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ. ಅಮ್ಮನನ್ನು ನೋಡಲು ತುಂಬಾ ಆಸೆಯಾಗಿದೆ. ನನ್ನನ್ನು ಬಿಟ್ಟು ಹೋಗಬೇಡ ಎಂದು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಭಾವನಾತ್ಮಕ ಪತ್ರ ಕಳುಹಿಸಿದ್ದಾಳೆ.