ನ್ಯೂಜೆರ್ಸಿ: ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಕೈಗೆ ಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ,
ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವ ಮುನ್ನಾ ಆತನ ಕೈಗೆ ಕೋಳ ಹಾಕಿ ನೆಲಕ್ಕೆ ಒತ್ತುವ ವೀಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಎಂಬವರು ಈ ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ನಾಲ್ವರು ಅಧಿಕಾರಿಗಳು ವಿದ್ಯಾರ್ಥಿಯನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ಮೊಣಕಾಲುಗಳನ್ನು ವಿದ್ಯಾರ್ಥಿ ಬೆನ್ನಿನ ಮೇಲೆ ಇಟ್ಟುಕೊಂಡಿದ್ದು, ವಿದ್ಯಾರ್ಥಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಹಾಕಿದ್ದಾರೆ.
ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಿ ಆತನನ್ನು ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಆತ ಕನಸುಗಳನ್ನು ಹೊತ್ತು ಬಂದಿದ್ದ. ಒಬ್ಬ ಅನಿವಾಸಿ ಭಾರತೀಯನಾಗಿ, ನಾನು ಅಸಹಾಯಕನಾದೆ. ಇದು ಮಾನವ ದುರಂತ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜೈನ್ ಬರೆದುಕೊಂಡಿದ್ದಾರೆ.
ವಿಷಯದ ಬಗ್ಗೆ ತನಿಖೆ ಮಾಡಲು ಮತ್ತು ವಿದ್ಯಾರ್ಥಿಗೆ ಸಹಾಯ ಮಾಡಲು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಜೈನ್ ಮನವಿ ಮಡಿಕೊಂಡಿದ್ದಾರೆ.
ಈ ಘಟನೆ ನಡೆದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಗೆ ತೊಂದರೆ ನೀಡಿರುವುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ಪ್ರಜೆಗಳ ಕಲ್ಯಾಣಕ್ಕಾಗಿ ಕಾನ್ಸುಲೇಟ್ ಎಂದಿಗೂ ಬದ್ಧವಾಗಿದೆ" ಎಂದು ಅದು ಹೇಳಿದೆ.