ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಘರ್ಷಣೆ ಕೇವಲ ಎರಡು ನೆರೆಹೊರೆಯವರ ನಡುವಿನ ಸಂಘರ್ಷವಲ್ಲ, ಬದಲಾಗಿ ಇದು ಭಯೋತ್ಪಾದನೆಯ ವಿರುದ್ಧದ ಹೋರಾಟವಾಗಿದೆ. ಇದು ಅಂತಿಮವಾಗಿ ಪಾಶ್ಚಿಮಾತ್ಯ ದೇಶಗಳಿಗೂ ತೊಂದರೆ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಯುರೋಪಿಯನ್ ಸುದ್ದಿ ವೆಬ್‌ಸೈಟ್ ಯೂರಾಕ್ಟಿವ್‌ಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, EU-ಭಾರತ ಮುಕ್ತ ವ್ಯಾಪಾರದ ಬಗ್ಗೆ ಮಾತನಾಡಿದರು. 1.4 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತವು ಚೀನಾಕ್ಕಿಂತ ಕೌಶಲ್ಯಪೂರ್ಣ ಕಾರ್ಮಿಕರನ್ನು ಮತ್ತು ಹೆಚ್ಚು ವಿಶ್ವಾಸಾರ್ಹ ಆರ್ಥಿಕ ಪಾಲುದಾರಿಕೆಯನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರವಾಗಿ 'ಆಪರೇಷನ್ ಸಿಂಧೂರ್' ಪ್ರಾರಂಭವಾದ ಸುಮಾರು ಒಂದು ತಿಂಗಳ ನಂತರ ಯುರೋಪ್‌ಗೆ ಭೇಟಿ ನೀಡಿದ್ದ ಜೈಶಂಕರ್, "ಒಸಾಮಾ ಬಿನ್ ಲಾಡೆನ್ ಎಂಬ ವ್ಯಕ್ತಿ ಇದ್ದನೆಂದು ನಾನು ನಿಮಗೆ ಒಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ. ಪಾಕಿಸ್ತಾನಿ ಸೇನಾ ಕಂಟೋನ್ಮೆಂಟ್ ಪಟ್ಟಣದಲ್ಲಿ ಅವನು ವರ್ಷಗಳ ಕಾಲ ಸುರಕ್ಷಿತವಾಗಿರಲು ಕಾರಣವೇನು?" ಎಂದು ಪ್ರಶ್ನಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ನಾಲ್ಕು ದಿನಗಳ ಸಂಘರ್ಷದ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಆಪರೇಷನ್ ಸಿಂಧೂರ್ ಅನ್ನು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ಪ್ರತೀಕಾರಕ್ಕಾಗಿ ನಡೆದಿದೆ ಎಂದು ಬಿಂಬಿಸಿದ ಅಂತರರಾಷ್ಟ್ರೀಯ ಮಾಧ್ಯಮವನ್ನು ಟೀಕಿಸಿದ ಅವರು, ಇದು ಕೇವಲ ಭಾರತ-ಪಾಕಿಸ್ತಾನದ ಸಮಸ್ಯೆಯಲ್ಲ ಎಂದು ಜಗತ್ತು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದು ಭಯೋತ್ಪಾದನೆಯ ಬಗ್ಗೆ ಮತ್ತು ಇದು ಅಂತಿಮವಾಗಿ ನಿಮಗೂ ಭಯೋತ್ಪಾದನೆ ಕಾಡಲಿದೆ ಎಂದರು.