ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪರಿಣಾಮ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿರುವುದು ಪಾಕಿಸ್ತಾನದಲ್ಲಿನ ಬೆಳೆಗಳ ಮೇಲೆ ತೀವ್ರವಾದ ಪರಿಣಾಮಗಳನ್ನುಂಟುಮಾಡುತ್ತಿದೆ.
ಭಾರತ ಸಿಂಧೂ ನದಿ ವ್ಯವಸ್ಥೆಯಿಂದ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಪಾಕಿಸ್ತಾನದಲ್ಲಿ ಖಾರಿಫ್ ಅಥವಾ ಮಾನ್ಸೂನ್ ಬೆಳೆಗಳ ಬಿತ್ತನೆಗೆ ತೊಂದರೆಯಾಗುತ್ತಿದೆ ಎಂದು ಇಸ್ಲಾಮಾಬಾದ್ ವರದಿಯೊಂದು ಹೇಳಿದೆ.
ಪಾಕಿಸ್ತಾನ ಸರ್ಕಾರದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ (IRSA) ಬಿಡುಗಡೆ ಮಾಡಿದ ಇತ್ತೀಚಿನ "ದೈನಂದಿನ ನೀರಿನ ಪರಿಸ್ಥಿತಿ" ವರದಿಯ ಪ್ರಕಾರ ಈ ವರ್ಷ ಜೂನ್ 16 ರಂದು ಸಿಂಧೂ ನದಿ ವ್ಯವಸ್ಥೆಯಿಂದ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಬಿಡುಗಡೆ ಮಾಡಲಾದ ಒಟ್ಟು ನೀರಿನ ಪ್ರಮಾಣ 1.33 ಲಕ್ಷ ಕ್ಯೂಸೆಕ್ ಆಗಿದ್ದು, ಕಳೆದ ವರ್ಷ ಇದೇ ದಿನ 1.6 ಲಕ್ಷ ಕ್ಯೂಸೆಕ್ ಆಗಿತ್ತು ಎಂದು ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನೀರಿನ ಪ್ರಮಾಣ 16.87% ರಷ್ಟು ಕಡಿಮೆಯಾಗಿದೆ.
ಸಿಂಧೂ ನದಿ ವ್ಯವಸ್ಥೆಯಿಂದ ಪಂಜಾಬ್ ಪ್ರಾಂತ್ಯಕ್ಕೆ ಕಳೆದ ವರ್ಷ 1.29 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಈ ವರ್ಷ 1.26 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದು 2.25% ರಷ್ಟು ಇಳಿಕೆಯನ್ನು ಇದು ಸೂಚಿಸುತ್ತಿದೆ.
ಖಾರಿಫ್ ಬೆಳೆಗಳ ಬಿತ್ತನೆ ನಡೆಯುತ್ತಿರುವ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಿಂಧೂ ನದಿ ವ್ಯವಸ್ಥೆಗೆ ಸಂಪರ್ಕ ಹೊಂದಿದ ನದಿಗಳು ಮತ್ತು ಜಲಾಶಯಗಳಲ್ಲಿ ಕಡಿಮೆ ನೀರು ಉಳಿದಿದೆ. ಇದು ದೇಶದ ರೈತರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಮತ್ತು ದೇಶದಲ್ಲಿ ಮುಂಗಾರು ಇನ್ನೂ ಕನಿಷ್ಠ ಎರಡು ವಾರಗಳಿರುವಾಗ, ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ.
ಪ್ರವಾಹ ಸಿದ್ಧತೆಗೆ ಧಕ್ಕೆಯಾಗಿದೆಯೇ?
ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ, ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ನದಿ ವ್ಯವಸ್ಥೆಗೆ ಸಂಪರ್ಕ ಹೊಂದಿದ ನದಿಗಳ ನೀರಿನ ಮಟ್ಟದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ.
ಆದ್ದರಿಂದ, ಭಾರತದಲ್ಲಿ ಸಿಂಧೂ ನದಿ ವ್ಯವಸ್ಥೆಗೆ ಸಂಪರ್ಕ ಹೊಂದಿದ ನದಿಗಳ ನೀರಿನ ಮಟ್ಟ ಹೆಚ್ಚಾದಾಗ, ಕೆಳಗಿರುವ ಪಾಕಿಸ್ತಾನವು ಪ್ರವಾಹ ಉಂಟಾದರೆ ಅಗತ್ಯ ಸಿದ್ಧತೆಗಳಿಲ್ಲದೇ ಪಾಕಿಸ್ತಾನ ಸಂಕಷ್ಟ ಎದುರಿಸಬೇಕಾಗುತ್ತದೆ.
ಒಪ್ಪಂದದ ವಿವರಗಳು
1960 ರಲ್ಲಿ ಸಹಿ ಹಾಕಲ್ಪಟ್ಟ ಮತ್ತು ದೇಶಗಳ ನಡುವಿನ ಉದ್ವಿಗ್ನತೆಯ ಹೊರತಾಗಿಯೂ ಅಂದಿನಿಂದ ಜಾರಿಯಲ್ಲಿರುವ ಸಿಂಧೂ ನೀರಿನ ಒಪ್ಪಂದವನ್ನು, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸ್ಥಗಿತಗೊಳಿಸಿತು. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.
ಒಪ್ಪಂದದ ಅಮಾನತುಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದ್ದರೂ, ಭಾರತವು "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂದು ಪದೇ ಪದೇ ಹೇಳುತ್ತಿದೆ.