ಟೆಹರಾನ್: ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಉದ್ವಿಗ್ನತೆ ಶಮನಕ್ಕೆ ಕರೆ ನೀಡಿರುವ ಇಸ್ರೇಲ್ ಪರ ರಾಷ್ಟ್ರಗಳಿಂದ ಪಕ್ಷಪಾತ ಆಗಿರುವುದಾಗಿ ಇರಾನ್ ಆರೋಪಿಸಿದೆ.
ಜಿ-7 ರಾಷ್ಟ್ರಗಳು ತನ್ನ ಪಕ್ಷಪಾತ ಧೋರಣೆಯನ್ನು ತ್ಯಜಿಸಬೇಕು ಮತ್ತು ಉದ್ವಿಗ್ನತೆ ಉಲ್ಬಣಕ್ಕೆ ನಿಜವಾದ ಕಾರಣವಾದ ಇಸ್ರೇಲ್ ನ ಆಕ್ರಮಣಕಾರಿತ್ವವನ್ನು ತಡೆಗಟ್ಟಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೈಲ್ ಬಕೈ ಹೇಳಿದ್ದಾರೆ
ಇರಾನ್ ವಿರುದ್ಧ ಅಪ್ರಚೋದಿತ ಆಕ್ರಮಣಕಾರಿ ಯುದ್ಧವನ್ನು ಇಸ್ರೇಲ್ ಪ್ರಾರಂಭಿಸಿದೆ. ಇದು ವಿಶ್ವಸಂಸ್ಥೆಯ ನಿಯಾಮಾವಳಿಗಳ ಉಲ್ಲಂಘನೆಯಾಗಿದೆ ಎಂದು ವಕ್ತಾರರು ಆರೋಪಿಸಿದ್ದಾರೆ.
ನೂರಾರು ಮುಗ್ಧ ಜನರ ಹತ್ಯೆಯಾಗಿದೆ. ನಮ್ಮ ಸಾರ್ವಜನಿಕ ಮತ್ತು ರಾಜ್ಯದ ಕಟ್ಟಡಗಳು, ಜನರ ಮನೆಗಳನ್ನು ಕ್ರೂರವಾಗಿ ಕೆಡವಲಾಗಿದೆ. ಕ್ರೂರ ಆಕ್ರಮಣದ ವಿರುದ್ಧ ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಇರಾನ್‌ಗೆ ನಿಜವಾಗಿಯೂ ಬೇರೆ ಆಯ್ಕೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಸೋಮವಾರ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ನಾಯಕರು ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ ಎಂದು ಹೇಳುವ ಮೂಲಕ ಉದ್ವಿಗ್ವತೆ ಶಮನಕ್ಕೆ ಕರೆ ನೀಡಿದ್ದರು. ಮಧ್ಯಪ್ರಾಚ್ಯದಲ್ಲಿ "ಶಾಂತಿ ಮತ್ತು ಸ್ಥಿರತೆಗೆ" ಬದ್ಧರಾಗಿರುವುದಾಗಿ ಅಂತಿಮ ಹೇಳಿಕೆಯಲ್ಲಿ ಜಿ7 ನಾಯಕರು ಹೇಳಿದರು.
ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಇಸ್ರೇಲ್ ಭದ್ರತೆಗೆ ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ಇರಾನ್ ಪ್ರಾದೇಶಿಕ ಅಸ್ಥಿರತೆ ಮತ್ತು ಭಯೋತ್ಪಾದನೆಯ ಪ್ರಮುಖ ಮೂಲವಾಗಿದೆ ಎಂದು ಜಿ-7 ರಾಷ್ಟ್ರಗಳ ನಾಯಕರು ಆರೋಪಿಸಿದರು.
"ಇರಾನ್ ಎಂದಿಗೂ ಪರಮಾಣು ಅಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂದು ನಿರಂತರವಾಗಿ ಸ್ಪಷ್ಟಪಡಿಸಿದ್ದೇವೆ. ಇರಾನ್ ಬಿಕ್ಕಟ್ಟಿನ ಪರಿಹಾರವು ಮಧ್ಯಪ್ರಾಚ್ಯದಲ್ಲಿ ವ್ಯಾಪಕವಾದ ಉದ್ವಿಗ್ನತೆ ಶಮನಕ್ಕೆ ಕಾರಣವಾಗುತ್ತದೆ ಎಂದು ಜಿ-7 ರಾಷ್ಟ್ರಗಳು ಹೇಳಿದವು.