ಜೆರುಸಲೇಂ: ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಇರಾಕ್ ನ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಗೆ ಆದ ಗತಿಯೇ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಗೂ ಆಗಬಹುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಸೇನೆ ಮತ್ತು ಭದ್ರತಾ ಸೇವೆಗಳ ಕಮಾಂಡರ್ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಕಾಟ್ಜ್, ಸದ್ದಾಂ ಹುಸೇನ್ ರೀತಿ ಅಯತೊಲ್ಲಾ ಅಲಿ ಖಮೇನಿಗೂ ಬರಬಹುದು ಎಂದು ಹೇಳಿರುವುದಾಗಿ ಅವರ ಕಚೇರಿ ತಿಳಿಸಿದೆ.
ಯುದ್ಧ ಅಪರಾಧಗಳನ್ನು ನಡೆಸುತ್ತಿರುವ ಮತ್ತು ಇಸ್ರೇಲ್ ನಾಗರಿಕರ ವಿರುದ್ಧ ಕ್ಷಿಪಣಿ ದಾಳಿ ಮುಂದುವರೆಸುತ್ತಿರುವ ಇರಾನ್ ಸರ್ವೋಚ್ಛ ನಾಯಕರಿಗೆ ಮುಂದಿನ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
2003ರಲ್ಲಿ ಅಮೆರಿಕದ ನೇತೃತ್ವದಲ್ಲಿ ಸದ್ದಾಂನನ್ನು ಬಂಧಿಸಿ, ಬಳಿಕ ಗಲ್ಲಿಗೇರಿಸಲಾಗಿತ್ತು. ಸದ್ದಾಂ ಸರ್ಕಾರ 1991ರಲ್ಲಿ ಗಲ್ಫ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಮತ್ತು ರಹಸ್ಯ ಪರಮಾಣು ಶಸ್ತ್ರಾಸ್ತ್ರ ಯೋಜನೆ ರೂಪಿಸಿತ್ತು ಎಂದು ಆರೋಪಿಸಲಾಗಿತ್ತು.