ಟೆಹರಾನ್: ಇಸ್ರೇಲ್ ವಿರುದ್ಧದ ಸಂಘರ್ಷವನ್ನು ಕೊನೆಗಾಣಿಸಿ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಗಡುವಿಗೆ ಡೊಂಟ್ ಕೇರ್ ಎನ್ನದ ಇರಾನ್ ಇದೀಗ ತಾನೇ ಗಡುವು ನೀಡಿದೆ. ಬೆಳಗ್ಗೆ 4 ಗಂಟೆಯೊಳಗೆ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ಟೆಹರಾನ್ ಅಂತಿಮ ಡೆಡ್ ಲೈನ್ ನೀಡಿದೆ.
''ಇರಾನ್ ಪದೇ ಪದೇ ಸ್ಪಷ್ಪಪಡಿಸುತ್ತಿದೆ. ಇರಾನ್ ಮೇಲೆ ಯುದ್ಧ ಶುರು ಮಾಡಿರುವುದು ಇಸ್ರೇಲ್ ಆಗಿದ್ದು, ನಮ್ಮಗೆ ಬೇರೆ ದಾರಿಯಿಲ್ಲ. ಈಗ ಯಾವುದೇ ಕದನ ವಿರಾಮ ಒಪ್ಪಂದ ಅಥವಾ ಮಿಲಿಟರಿ ಕಾರ್ಯಾಚರಣೆ ಸ್ಥಗಿತಕ್ಕೆ ಒಪ್ಪಂದ ಆಗಿಲ್ಲ' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ.
ಇರಾನ್ ವಿರುದ್ಧದ ಆಕ್ರಮಣವನ್ನು ಇಸ್ರೇಲ್ ಆಡಳಿತ ನಿಲ್ಲಿಸಿದರೆ ಬೆಳಗ್ಗೆ 4 ಗಂಟೆಯ ನಂತರ ನಮ್ಮ ಕಾರ್ಯಾಚರಣೆಯನ್ನು ಮುಂದುವರೆಸುವ ಉದ್ದೇಶ ಇಲ್ಲ ಎಂದಿದ್ದಾರೆ.
ನಮ್ಮ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ಕುರಿತು ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಪಪಡಿಸಿದ್ದಾರೆ. ಇಸ್ರೇಲ್ ನ ಆಕ್ರಮಣಕ್ಕೆ ಶಿಕ್ಷೆ ನೀಡಲು ನಮ್ಮ ಶಕ್ತಿಯುತ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆ ಮುಂಜಾನೆ 4 ಗಂಟೆಯ ಕೊನೆಯ ನಿಮಿಷದವರೆಗೂ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೂ ರಕ್ಷಿಸಲು ಮತ್ತು ಕೊನೆಯ ಕ್ಷಣದವರೆಗೂ ಶತ್ರುಗಳ ಯಾವುದೇ ದಾಳಿಗೆ ಪ್ರತಿಕ್ರಿಯಿಸಲು ಸಿದ್ಧರಿರುವ ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳಿಗೆ ಎಲ್ಲಾ ಇರಾನಿಯನ್ನರ ಜೊತೆಯಲ್ಲಿ ಧನ್ಯವಾದ ಹೇಳುತ್ತೇನೆ ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ತುರ್ತು ವಿಮಾನಗಳಿಗೂ ಇಸ್ರೇಲ್ ವಾಯು ಪ್ರದೇಶ ನಿರ್ಬಂಧ: ಈ ಮಧ್ಯೆ ತುರ್ತು ವಿಮಾನಗಳು ಸೇರಿದಂತೆ ಎಲ್ಲಾ ಪ್ರಯಾಣಿಕ ವಿಮಾನಗಳಿಗೆ ಇಸ್ರೇಲ್ ನಲ್ಲಿ ವಾಯು ಪ್ರದೇಶ ನಿರ್ಬಂಧಿಸಲಾಗಿದೆ ಎಂದು ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ ಇರಾನ್‌ನೊಂದಿಗಿನ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ, ಆದರೆ ಕೆಲವು ತುರ್ತು ವಿಮಾನಗಳು ಕಳೆದ ಕೆಲವು ದಿನಗಳಿಂದ ಆಗಮಿಸಲು ಮತ್ತು ನಿರ್ಗಮಿಸಲು ಶುರು ಮಾಡಿದ್ದವು.