ಕೈರೊ: ಕಳೆದ ವಾರ ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡ್ ಸೆಂಟರ್‌ನ ಮುಖ್ಯಸ್ಥ ಅಲಿ ಶದ್ಮನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
ಅಲಿ ಶದ್ಮನಿ ಅವರ ಹತ್ಯೆಗೆ "ತೀವ್ರ ಪ್ರತೀಕಾರ" ತೀರಿಸಿಕೊಳ್ಳುವುದಾಗಿ ರೆವಲ್ಯೂಷನರಿ ಗಾರ್ಡ್ಸ್ ಸೈನಿಕರು ಪ್ರತಿಜ್ಞೆ ಮಾಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ತಿಳಿಸಿದೆ.
ಇಸ್ರೇಲ್‌ನ ಸಶಸ್ತ್ರ ಪಡೆಗಳು ಜೂನ್ 17 ರಂದು ಶದ್ಮನಿಯನ್ನು ಕೊಂದಿರುವುದಾಗಿ ಹೇಳಿದ್ದವು. ಶದ್ಮನಿ ಅವರು ಇರಾನ್‌ನ ಯುದ್ಧಕಾಲದ ಅತ್ಯಂತ ಹಿರಿಯ ಸೇನಾ ಮುಖ್ಯಸ್ಥರಾಗಿದ್ದರು.
12 ದಿನಗಳ ಕಾಲ ನಡೆದ ಇಸ್ರೇಲ್-ಇರಾನ್ ಯುದ್ಧವನ್ನು ಕೊನೆಗೊಳಿಸಿದ ಅಮೆರಿಕ ಹೊಸದಾಗಿ ಹೇರಿದ ಕದನ ವಿರಾಮದ ಬೆನ್ನಲ್ಲೇ ನಡೆದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಕದನ ವಿರಾಮ ಜಾರಿಯಲ್ಲಿದೆ ಎಂದು ಹೇಳಿದ್ದು, ಇಸ್ರೇಲ್ ಇನ್ನು ಮುಂದೆ ಇರಾನ್ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಟೆಹ್ರಾನ್ ಕೂಡ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರ್ನಿರ್ಮಿಸುವುದಿಲ್ಲ ಎಂದು ಹೇಳಿದ್ದರು.