ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಕಳುಹಿಸಲಾಗಿರುವ ಪತ್ರಕ್ಕೆ ಭಾರತದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎಂದು ಬಾಂಗ್ಲಾದೇಶ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
ಮಾನವೀಯತೆಯ ವಿರುದ್ಧದ ಅಪರಾಧ'ಗಳಿಗಾಗಿ ಹಸೀನಾ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಯುಕೆ ಮೂಲದ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಯೂನಸ್ ಹೇಳಿರುವುದಾಗಿ ಸರ್ಕಾರದ ಬಿಎಸ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
77 ವರ್ಷದ ಹಸೀನಾ ಕಳೆದ ವರ್ಷ ಆಗಸ್ಟ್ 5 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಂತರ ಅವಾಮಿ ಲೀಗ್ ನ 16 ವರ್ಷಗಳ ಆಡಳಿತ ಪತನಗೊಂಡ ನಂತರ ಅವರು ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದ್ದರು.
ಮಾನವೀಯತೆ ವಿರುದ್ಧದ ಅಪರಾಧ ಮತ್ತು ನರಮೇಧಕ್ಕಾಗಿ ಹಸೀನಾ ಮತ್ತು ಹಲವಾರು ಮಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು ಮತ್ತು ಮಿಲಿಟರಿ- ನಾಗರಿಕ ಅಧಿಕಾರಿಗಳಿಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT)ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.
ವಿಚಾರಣೆ ನಡೆಯಲಿದೆ. ಹಸೀನಾ ಮಾತ್ರವಲ್ಲ, ಆಕೆಯ ಕುಟುಂಬ ಸದಸ್ಯರು, ಸಹಚರರು ವಿರುದ್ಧ ವಿಚಾರಣೆ ನಡೆಯಲಿದೆ. ಬಾಂಗ್ಲಾದೇಶವು ಆಕೆಗೆ ಎರಡು ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. 'ಔಪಚಾರಿಕ ಪತ್ರಗಳನ್ನು' ಕಳುಹಿಸಿದ್ದೇವೆ ಆದರೆ ಭಾರತದಿಂದ ಯಾವುದೇ 'ಅಧಿಕೃತ ಪ್ರತಿಕ್ರಿಯೆ ಇಲ್ಲ' ಎಂದು ಯೂನಸ್ ಹೇಳಿದರು.
ಕಳೆದ ವರ್ಷ ನವದೆಹಲಿರುವ ಬಾಂಗ್ಲಾದೇಶ ಹೈ ಕಮೀಷನ್ ನಿಂದ ಪತ್ರ ಸ್ವೀಕರಿಸಿರುವುದಾಗಿ ಭಾರತ ಖಚಿಪಡಿಸಿತ್ತು. ಆದರೆ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಸೀನಾ ಅವರು ಭೌತಿಕವಾಗಿ ಅಥವಾ ಗೈರುಹಾಜರಾಗಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ನೂರಾರು ಕಾರ್ಯಕರ್ತರ ಅಪಹರಣ, ಚಿತ್ರಹಿಂಸೆ ಮತ್ತು ಹತ್ಯೆಯ ಮೇಲ್ವಿಚಾರಣೆಗೆ ತನ್ನ ಭದ್ರತಾ ಪಡೆಗಳು ಮತ್ತು ಪೊಲೀಸರನ್ನು ಬಳಸಿಕೊಂಡ ಆರೋಪ ಹಸೀನಾ ಮೇಲಿದೆ ಎಂದು ಯೂನಸ್ ಹೇಳಿದ್ದಾರೆ. ಆದರೆ ಈ ಆರೋಪಗಳನ್ನು ಹಸೀನಾ ನಿರಾಕರಿಸಿದ್ದು, ,ತಾನು ರಾಜಕೀಯವಾಗಿ ಕಿರುಕುಳ ಅನುಭವಿಸಿರುವುದಾಗಿ ತಿಳಿಸಿದ್ದಾರೆ.