ಸಿಯೋಲ್: ದಕ್ಷಿಣ ಕೊರಿಯಾದ ಯುದ್ಧ ವಿಮಾನವೊಂದು ಇಂದು ಗುರುವಾರ ನಸುಕಿನ ಜಾವ ತರಬೇತಿ ವೇಳೆ ಜನವಸತಿ ಪ್ರದೇಶದ ಮೇಲೆ ಆಕಸ್ಮಿಕವಾಗಿ ಎಂಟು ಬಾಂಬ್‌ಗಳನ್ನು ಬೀಳಿಸಿದ್ದರಿಂದ ಏಳು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೆಎಫ್-16 ಫೈಟರ್ ಜೆಟ್ ನಿಂದ ಆಕಸ್ಮಿಕವಾಗಿ ಬಿದ್ದ ಎಂಕೆ-82 ಬಾಂಬ್ ಗಳಿಂದ ಕೆಲ ನಾಗರಿಕರಿಗೆ ಗಾಯಗಳಾಗಿವೆ ಎಂದು ಸಿಯೋಲ್ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ತನಿಖೆ ಮಾಡಲು ಮತ್ತು ನಾಗರಿಕ ಹಾನಿಯ ಪ್ರಮಾಣ ಬಗ್ಗೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಕೂಡ ವಾಯುಪಡೆ ತಿಳಿಸಿದೆ.
ವಾಯುಪಡೆಯು ಸೇನೆಯೊಂದಿಗೆ ಜಂಟಿ ಲೈವ್-ಫೈರಿಂಗ್ ಕವಾಯತುಗಳಲ್ಲಿ ಭಾಗವಹಿಸಿದ್ದ ವೇಳೆ ಘಟನೆ ನಡೆದಿದೆ. ನಾಗರಿಕರಿಗೆ ಉಂಟಾದ ಹಾನಿ ಬಗ್ಗೆ ವಾಯುಪಡೆ ಕ್ಷಮೆಯಾಚಿಸಿದ್ದು, ಗಾಯಗೊಂಡವರ ಚೇತರಿಕೆಗೆ ಭರವಸೆ ವ್ಯಕ್ತಪಡಿಸಿದೆ. ಅವರ ಚಿಕಿತ್ಸೆಗೆ ನೆರವಾಗುವುದಾಗಿ ಹಾಗೂ ಪರಿಹಾರ ಒದಗಿಸುವುದಾಗಿ ಕೂಡ ಭರವಸೆ ನೀಡಿದೆ.
ಅಪಘಾತ ಎಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿಲ್ಲ. ಆದರೆ ದಕ್ಷಿಣ ಕೊರಿಯಾದ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಉತ್ತರ ಕೊರಿಯಾದ ಗಡಿಗೆ ಸಮೀಪವಿರುವ ನಗರವಾದ ಪೋಚಿಯಾನ್‌ನಲ್ಲಿ ಸಂಭವಿಸಿದೆ.
ಐವರು ನಾಗರಿಕರು ಮತ್ತು ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಆದರೆ ಜೀವಕ್ಕೆ ಅಪಾಯಕಾರಿ ಅಲ್ಲ ಎಂದು ಹೇಳಿದೆ. ಘಟನೆಯಲ್ಲಿ ಏಳು ಕಟ್ಟಡಗಳು ಸಹ ಹಾನಿಗೊಳಗಾಗಿವೆ.