ಪ್ರತಿಯೊಂದು ಕಚೇರಿಯಲ್ಲಿ, ವೇತನ ಹೆಚ್ಚಳದ ದಿನವು ಕೆಲವರಿಗೆ ಸಂತೋಷ ತಂದರೆ ಇನ್ನು ಕೆಲವರಿಗೆ ದುಃಖವನ್ನು ತರುತ್ತದೆ. ಕೆಲವರಿಗೆ ಬಡ್ತಿ ಸಿಕ್ಕರೆ, ಇನ್ನು ಕೆಲವರಿಗೆ ನಿರಾಶೆಯಾಗುತ್ತದೆ. ಆದರೆ ಈ ಸಂಬಳ ಹೆಚ್ಚಳ ಮತ್ತು ಬಡ್ತಿಯಿಂದಾಗಿ ಕಚೇರಿಯಲ್ಲಿ ಕೊಲೆಗೆ ಸಂಚು ರೂಪಿಸಿದಾಗ ಏನಾಗುತ್ತದೆ? ಬ್ರೆಜಿಲ್‌ನ ಅಬಿದಾ ಡಿ ಗೋಯಾಸ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಅಲ್ಲಿ ಮಹಿಳೆಯೋರ್ವಳು ತನ್ನ ಸಹೋದ್ಯೋಗಿಯನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಪೊಲೀಸರ ಅತಿಥಿಯಾಗಿದ್ದಾಳೆ.
ಗೋಯಾಸ್ ಸಿವಿಲ್ ಪೊಲೀಸರ ಪ್ರಕಾರ, ಆರೋಪಿ ಮಹಿಳೆಯ ಹೆಸರು ಬಹಿರಂಗವಾಗಿಲ್ಲ, ಅವರು ತಮ್ಮ ಸಹೋದ್ಯೋಗಿಯ ಬಡ್ತಿಯಿಂದ ಅಸಮಾಧಾನಗೊಂಡಿದ್ದರು. ಫೆಬ್ರವರಿ 14 ರಂದು, ಬಾಸ್ ಬಡ್ತಿಯನ್ನು ಘೋಷಿಸಿದರು. ಅದು ಆಕೆ ಕೋಪಗೊಳ್ಳುವಂತೆ ಮಾಡಿತ್ತು. ಇದರಿಂದಾಗಿ ಆಕೆ ತನ್ನ ಸಹೋದ್ಯೋಗಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಆ ಮಹಿಳೆ ಈ ಬಾರಿ ತನಗೆ ಬಡ್ತಿ ಸಿಗುತ್ತದೆ ಎಂದು ಆಶಿಸಿದ್ದಳು. ಆದರೆ ಈ ಬಡ್ತಿ ಬೇರೆಯವರಿಗೆ ಹೋಯಿತು. ಇದರಿಂದ ಆಕೆಯ ಕೋಪ ಎಷ್ಟು ಹೆಚ್ಚಾಯಿತೆಂದರೆ ಅದಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದಳು.
ಬಡ್ತಿ ಪಡೆದ ಮಹಿಳೆ ಕಚೇರಿಯಿಂದ ಹೊರಗೆ ಹೋದಾಗ, ಆರೋಪಿ ಮಹಿಳೆ ಆಕೆಯ ನೀರಿನ ಬಾಟಲಿಯಲ್ಲಿ ವಿಷಕಾರಿ ರಾಸಾಯನಿಕವನ್ನು ಬೆರೆಸಿದ್ದಾಳೆ ಎಂದು ಡೈಲಿ ಮೇಲ್ ವರದಿ ತಿಳಿಸಿದೆ. ಇಡೀ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ನೀರಿನಲ್ಲಿ ಏನೋ ಬೆರೆಸುತ್ತಿರುವುದು ಕಂಡುಬಂದಿದೆ. ಸಂತ್ರಸ್ತೆ ನೀರು ಕುಡಿದಾಗ, ಬಾಯಿಯಲ್ಲಿ ಉರಿ ಅನುಭವವಾಯಿತು. ನಂತರ ಆಕೆ ತಕ್ಷಣ ವೈದ್ಯಕೀಯ ಸಂಪರ್ಕಿಸಿದಳು.
ಆರೋಪಿ ಮಹಿಳೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಆಕೆಗೆ ಆರರಿಂದ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಬ್ರೆಜಿಲ್‌ನಲ್ಲಿ ವಿಷಪೂರಿತ ದಾಳಿಯ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ತಿಂಗಳುಗಳಲ್ಲಿ, ದೇಶದಲ್ಲಿ ಹಲವಾರು ಪ್ರಮುಖ ವಿಷಪ್ರಾಶನ ಘಟನೆಗಳು ನಡೆದಿವೆ.
ಜನವರಿಯಲ್ಲಿ, ಡೈಸಿ ಡಾಸ್ ಅಂಜೋಸ್ ಎಂಬ ಮಹಿಳೆಯನ್ನು ತನ್ನ ಪತಿಯ ಕುಟುಂಬದ ಮೂವರು ಸದಸ್ಯರಿಗೆ ವಿಷಪೂರಿತ ಕ್ರಿಸ್‌ಮಸ್ ಕೇಕ್ ತಿನ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಕೆಲವು ವಾರಗಳ ನಂತರ, ಜೈಲಿನ ಕೋಣೆಯಲ್ಲಿ ಆಕೆಯ ಶವಪತ್ತೆಯಾಗಿತ್ತು. ಏತನ್ಮಧ್ಯೆ, ಮಾರಿಯಾ ಸಿಲ್ವಾ ಎಂಬ ಮತ್ತೊಬ್ಬ ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಲಾಯಿತು. ಹೊಸ ವರ್ಷದ ದಿನದ ಊಟದಲ್ಲಿ ವಿಷ ಬೆರೆಸಿ, ಆಕೆಯ ಕುಟುಂಬದ ಏಳು ಸದಸ್ಯರ ಸಾವಿಗೆ ಕಾರಣವಾದ ಆರೋಪ ಹೊರಿಸಲಾಯಿತು.