ಪಿಟ್ಸ್‌ಬರ್ಗ್: ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ, ಭಾರತೀಯ ಮೂಲದ 20 ವರ್ಷದ ಸುದೀಕ್ಷಾ ಕೊನಂಕಿ ಅವರು ಡೊಮಿನಿಕನ್ ಗಣರಾಜ್ಯದ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಸುದೀಕ್ಷಾ ಅವರು ತಮ್ಮ ಸ್ನೇಹಿತರೊಂದಿಗೆ ರಜೆಗೆ ಪ್ರವಾಸ ಹೋಗಿದ್ದರು. ಮಾರ್ಚ್ 6 ರಂದು ಪಂಟಾ ಕಾನಾದ ರೆಸಾರ್ಟ್ ಪಟ್ಟಣದ ರಿಯು ರಿಪಬ್ಲಿಕಾ ಹೋಟೆಲ್‌ನ ಬೀಚ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಶನಿವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಡೊಮಿನಿಕನ್ ಗಣರಾಜ್ಯದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಕೊನಂಕಿಯ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು, ಹುಡುಕಾಟದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ದೃಢಪಡಿಸಿದೆ.
ಏತನ್ಮಧ್ಯೆ, ಕೊನಂಕಿ ವಾಸಿಸುವ ವರ್ಜೀನಿಯಾದ ಲೌಡೌನ್ ಕೌಂಟಿಯಲ್ಲಿರುವ ಶೆರಿಫ್ ಕಚೇರಿಯು, ಅವರು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಇತರ ಐದು ಮಹಿಳಾ ಸ್ನೇಹಿತರೊಂದಿಗೆ ಬೀಚ್ ರೆಸಾರ್ಟ್‌ನಲ್ಲಿದ್ದರು ಎಂದು ತಿಳಿಸಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, 20 ವರ್ಷದ ಯುವತಿ ಬಿಕಿನಿ ಧರಿಸಿ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಣ್ಮರೆಯಾಗಿದ್ದಾಳೆ ಎನ್ನಲಾಗಿದೆ.
ಸದ್ಯ ಹೋಟೆಲ್‌ನ ಸಿಸಿಟಿವಿ ಆಧರಿಸಿ ಡೊಮಿನಿಕನ್ ರಿಪಬ್ಲಿಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗುರುವಾರ ಬೆಳಿಗ್ಗೆ ಸುಮಾರು 4:15 ಕ್ಕೆ ಕೊಣಂಕಿ ನಾಪತ್ತೆಯಾಗಿದ್ದಾರೆ ಎಂದು ಡೊಮಿನಿಕನ್ ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.