ಉತ್ತರ ಮೆಕೆಡೊನಿಯಾದ ನೈಟ್‌ಕ್ಲಬ್‌ನಲ್ಲಿ ಭಾರಿ ಅಗ್ನಿ ಅವಘಡ: 59 ಮಂದಿ ಸಜೀವ ದಹನ
ಗಾಯಾಳುಗಳನ್ನು ರಾಜಧಾನಿ ಸ್ಕೋಪ್ಜೆ ಸೇರಿದಂತೆ ದೇಶಾದ್ಯಂತದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ ಹಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಕಾನಿ: ಉತ್ತರ ಮೆಕೆಡೊನಿಯಾದ ಪೂರ್ವ ಪಟ್ಟಣವಾದ ಕೊಕಾನಿಯಲ್ಲಿರುವ ನೈಟ್‌ಕ್ಲಬ್‌ನಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 59 ಜನ ಸಾವನ್ನಪ್ಪಿದ್ದಾರೆ ಮತ್ತು 155 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಲಬ್ ಪಲ್ಸ್‌ನಲ್ಲಿ ಸ್ಥಳೀಯ ಪಾಪ್ ಗುಂಪಿನ ಸಂಗೀತ ಕಚೇರಿಯ ಸಮಯದಲ್ಲಿ ಬೆಳಗಿನ ಜಾವ 2:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಆಂತರಿಕ ಸಚಿವ ಪಂಚೆ ತೋಷ್ಕೋವ್ಸ್ಕಿ ವರದಿಗಾರರಿಗೆ ತಿಳಿಸಿದ್ದಾರೆ.
ಒಟ್ಟು 59 ಮಂದಿ ಸಜೀವ ದಹನವಾಗಿದ್ದು, ಇದುವರೆಗೆ ಮೃತಪಟ್ಟವರ ಪೈಕಿ 39 ಜನರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರಂಭಿಕ ತನಿಖೆಯ ಪ್ರಕಾರ, ಪೈರೋಟೆಕ್ನಿಕ್‌ಗಳು ಕ್ಲಬ್ ನ ಸೀಲಿಂಗ್ ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.
ಗಾಯಾಳುಗಳನ್ನು ರಾಜಧಾನಿ ಸ್ಕೋಪ್ಜೆ ಸೇರಿದಂತೆ ದೇಶಾದ್ಯಂತದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ ಹಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
118 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಬೇನಿಯಾ, ಬಲ್ಗೇರಿಯಾ, ಗ್ರೀಸ್ ಮತ್ತು ಸೆರ್ಬಿಯಾ ಸೇರಿದಂತೆ ನೆರೆಯ ದೇಶಗಳು ನೆರವಿನ ಹಸ್ತ ಚಾಚಿವೆ ಎಂದು ಆರೋಗ್ಯ ಸಚಿವ ಅರ್ಬೆನ್ ತಾರಾವರಿ ಅವರು ಹೇಳಿದ್ದಾರೆ.