ಟೋಕಿಯೋ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂ ಉಗ್ರ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರ ಭಾರತದ ನಿಲುವು ಏನು ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು ವಿವಿಧ ದೇಶಗಳಿಗೆ ಸರ್ವಪಕ್ಷಗಳ ಸಂಸದರ ಏಳು ನಿಯೋಗಗಳನ್ನು ಕಳುಹಿಸಿದೆ.
ಜಪಾನ್ಗೆ ಭೇಟಿ ನೀಡಿರುವ ಭಾರತದ ನಿಯೋಗದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, 'ಭಯೋತ್ಪಾದನೆ ಹುಚ್ಚು ನಾಯಿಯಾಗಿದ್ದರೆ, ಪಾಕಿಸ್ತಾನ ಅದರ ದುಷ್ಟ ಪೋಷಕ' ಎಂದು ಟೀಕಿಸಿದ್ದಾರೆ.
ಇಂದು ಟೋಕಿಯೋದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, ಪಾಕಿಸ್ತಾನವನ್ನು ಕಟುವಾಗಿ ಖಂಡಿಸಿದರು. ಭಯೋತ್ಪಾದನೆಯ "ದುಷ್ಟ ಪೋಷಕ" ಎಂದು ಕಿಡಿ ಕಾರಿದರು.
ಜಪಾನ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, "ಭಯೋತ್ಪಾದನೆ ಒಂದು ಹುಚ್ಚು ನಾಯಿಯಾಗಿದ್ದರೆ, ಪಾಕಿಸ್ತಾನ ಅದರ ದುಷ್ಟ ಪೋಷಕ ಮತ್ತು ಅದನ್ನು ಎದುರಿಸಲು ಜಗತ್ತು ಒಂದಾಗಬೇಕು" ಎಂದು ಹೇಳಿದರು.
ಭಾರತವು ಯಾರ ಭಯಕ್ಕೂ ಮಣಿಯುವುದಿಲ್ಲ. ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಎಂದು ಪ್ರತಿಪಾದಿಸಿದ ಬ್ಯಾನರ್ಜಿ, "ಸತ್ಯವನ್ನು ತಿಳಿಸಲು ನಾವು ಇಲ್ಲಿಗೆ ಬಂದಿದ್ದೇವೆ" ಎಂದು ಅವರು ಹೇಳಿದರು.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಬ್ಯಾನರ್ಜಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತವು ಮೇ 7 ರಂದು ನಡೆಸಿದ ನಿಖರವಾದ ವಾಯುದಾಳಿಯನ್ನು ಎತ್ತಿ ತೋರಿಸಿದರು. ಇದರ ನಂತರ ಮುಂದಿನ ಮೂರು ದಿನಗಳ ಕಾಲ ಪಾಕಿಸ್ತಾನ, ಭಾರತೀಯ ಸೇನಾ ನೆಲೆಗಳ ಮೇಲೆ ಪ್ರತೀಕಾರದ ದಾಳಿ ನಡೆಸಲು ಯತ್ನಿಸಿತು ಎಂದರು.
ಭಾರತೀಯ ವಲಸಿಗರು ನಮ್ಮ ದೇಶದ "ಶ್ರೇಷ್ಠ ಆಸ್ತಿ" ಎಂದು ಕರೆದ ಅಭಿಷೇಕ್ ಬ್ಯಾನರ್ಜಿ, "ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಸಂದೇಶದ ಪ್ರತಿಪಾದಕರಾಗಿ" ಎಂದು ಕರೆ ನೀಡಿದರು.
"ನಿಮ್ಮ ವಲಯಗಳಲ್ಲಿ, ನಿಮ್ಮ ನೆಟ್‌ವರ್ಕ್‌ಗಳ ಮೂಲಕ ಮತ್ತು ಸ್ಥಳೀಯ ಪ್ರಭಾವಿಗಳ ಮೂಲಕ, ನಿಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.