ಪೇಶಾವರ: ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುರುವಾರ ಭಯೋತ್ಪಾದನಾ ನಿಗ್ರಹ ಇಲಾಖೆಯೊಂದಿಗಿನ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಟಿಟಿಪಿ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಪೇಶಾವರದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಖೈಬರ್ ಪಖ್ತುಂಖ್ವಾದ ಕರಕ್‌ನ ಅಂಬೆರಿ ಕಲ್ಲಾ ಪ್ರದೇಶದಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಯು ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು ಮತ್ತು ಭೀಕರ ಗುಂಡಿನ ಚಕಮಕಿಯಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಕಮಾಂಡರ್ ಹಕೀಮ್ ನಿಸಾರ್ ಹತ್ಯೆ ಮಾಡಲಾಗಿದೆ.
ಗುಂಡಿನ ಚಕಮಕಿಯ ಸಮಯದಲ್ಲಿ, ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಹಕೀಮ್ ನಿಸಾರ್, ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ಈ ಪ್ರದೇಶದಲ್ಲಿ ನಡೆದ ಹಲವು ಹತ್ಯೆಗಳು ಸೇರಿದಂತೆ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ನಂತರ, ಪ್ರದೇಶವನ್ನು ಸುತ್ತುವರಿಯಲಾಯಿತು ಮತ್ತು ಹತ್ತಿರದಲ್ಲಿ ಇತರ ಬೇರೆ ಯಾವುದೇ ಭಯೋತ್ಪಾದಕರು ಅಡಗಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.