ಢಾಕಾ: ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಗಲ್ಲು ಶಿಕ್ಷೆಗೆ ಗುರಿಯಾದ ಕೆಲವೇ ಗಂಟೆಗಳ ನಂತರ, ಬಾಂಗ್ಲಾದೇಶ ಸೋಮವಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಒತ್ತಾಯಿಸಿದೆ.
ಆಗಸ್ಟ್ 2024 ರಲ್ಲಿ ನಡೆದ ಸಾಮೂಹಿಕ ದಂಗೆಯಲ್ಲಿ ಪದಚ್ಯುತಗೊಂಡ ನಂತರ 78 ವರ್ಷದ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ್ದು, ಅಂದಿನಿಂದ ದೆಹಲಿಯಲ್ಲಿಯೇ ನೆಲೆಸಿದ್ದಾರೆ. ಇದು ಎರಡು ನೆರೆಹೊರೆಯವರ ನಡುವಿನ ಸಂಬಂಧವನ್ನು ಹದಗೆಡಿಸಿದೆ.
ಸೋಮವಾರ, ಢಾಕಾದ ನ್ಯಾಯಾಲಯವು ಹಸೀನಾ ಮತ್ತು ಮಾಜಿ ಆಂತರಿಕ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಅವರ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿದೆ.
ಕಳೆದ ವರ್ಷ ನಡೆದ ವಿದ್ಯಾರ್ಥಿ ನೇತೃತ್ವದ ದಂಗೆಯ ವಿರುದ್ಧ ಮಾರಕ ದಮನ ಕಾರ್ಯಾಚರಣೆಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಖಾನ್ ಕಮಲ್ ತಪ್ಪಿತಸ್ಥರೆಂದು ಘೋಷಿಸಿ, ಶಿಕ್ಷೆ ನೀಡಲಾಗಿದೆ.
ಮಾಜಿ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರು ಇರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅವರು ಭಾರತದಲ್ಲಿದ್ದಾರೆ ಎಂದು ಬಾಂಗ್ಲಾದೇಶ ಹೇಳುತ್ತಿದೆ.
"ಇಬ್ಬರು ಅಪರಾಧಿಗಳನ್ನು ತಕ್ಷಣ ಬಾಂಗ್ಲಾದೇಶ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಢಾಕಾದ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಇದು "ಭಾರತದ ಕಡ್ಡಾಯ ಜವಾಬ್ದಾರಿ" ಎಂದು ಹೇಳಿದೆ.
"ಈ ಅಪರಾಧಿಗಳಿಗೆ ಆಶ್ರಯ ನೀಡುವುದು ... ಅತ್ಯಂತ ಸ್ನೇಹಪರವಲ್ಲದ ಮತ್ತು ನ್ಯಾಯಕ್ಕೆ ಅವಮಾನವಾಗುತ್ತದೆ" ಎಂದು ಬಾಂಗ್ಲಾದೇಶ ಎಚ್ಚರಿಸಿದೆ.
ಕಳೆದ ವರ್ಷ ಬಾಂಗ್ಲಾದೇಶ ಹಸೀನಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೋರಿದಾಗ, ಬಾಂಗ್ಲಾದೇಶದಿಂದ ಗಡಿಪಾರು ವಿನಂತಿಯನ್ನು ಸ್ವೀಕರಿಸಲಾಗಿದೆ ಎಂದು ಭಾರತ ಹೇಳಿತ್ತು. ಆದರೆ ಆ ಸಮಯದಲ್ಲಿ, ಅದು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿತ್ತು.
ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿಯಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ಕಂಡುಬಂದಿದ್ದು, ಅದರಲ್ಲಿ ಅವರ ರಾಜಕೀಯ ವಿರೋಧಿಗಳ ಸಾಮೂಹಿಕ ಬಂಧನ ಮತ್ತು ಕಾನೂನುಬಾಹಿರ ಹತ್ಯೆಗಳು ಸೇರಿವೆ.
ಗಲ್ಲು ಶಿಕ್ಷೆ ಸ್ವಾಗತಿಸಿದ ಯೂನಸ್
ಇನ್ನು ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಅವರು ಮಾಜಿ ಪ್ರಧಾನಿಗೆ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯ ತೀರ್ಪನ್ನು ಸ್ವಾಗತಿಸಿದ್ದಾರೆ.
"ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ಶೇಖ್ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ವಿಧಿಸಿರುವುದು ಐತಿಹಾಸಿಕ ತೀರ್ಪು" ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.