ಚಂಡೀಗಢ: ಹರಿಯಾಣ ಮೂಲದ ಯುವಕನನ್ನು ಬ್ರಿಟನ್ ನಲ್ಲಿ ಹತ್ಯೆ ಮಾಡಲಾಗಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಸಹಾಯ ಮಾಡುವಂತೆ ಕುಟುಂಬವು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದೆ.
ಮಂಗಳವಾರ (ನವೆಂಬರ್ 25) ಬೆಳಿಗ್ಗೆ 4:15 ರ ಸುಮಾರಿಗೆ, ವೋರ್ಸೆಸ್ಟರ್‌ನ ಬಾರ್ಬೋರ್ನ್ ರಸ್ತೆಯಲ್ಲಿ ಹರಿಯಾಣ ಮೂಲದ ಭಾರತೀಯ ವಿದ್ಯಾರ್ಥಿ ವಿಜಯ್ ಕುಮಾರ್ ಶಿಯೋರನ್ (30) ಅವರನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಯುವಕನ ಕುಟುಂಬವು ಮೃತದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೊಲೆಯ ಅನುಮಾನದ ಮೇರೆಗೆ ಐವರನ್ನು ಬಂಧನಕ್ಕೊಳಪಡಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಆರೋಪಿಗಳು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ.
ತನಿಖೆ ಮುಂದುವರೆದಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಕೊಲೆಯ ಶಂಕೆಯ ಮೇಲೆ ಬಂಧಿಸಲ್ಪಟ್ಟ ಐದು ಜನರು ಈಗ ಜಾಮೀನಿನ ಮೇಲೆ ಇದ್ದಾರೆ. ನಮ್ಮ ವಿಚಾರಣೆಗೆ ಸಹಾಯ ಮಾಡುವ ಯಾವುದೇ ಮಾಹಿತಿಯನ್ನು ಹೊಂದಿರುವ ಯಾರಾದರೂ ದಯವಿಟ್ಟು ಮುಂದೆ ಬರಬೇಕೆಂದು ನಾನು ಮನವಿ ಮಾಡುತ್ತೇನೆ, ಮಾಹಿತಿ ಸ್ವಲ್ವವೇ ಆದರೂ ಸರಿ ಅದೇ ನಮಗೆ ಪ್ರಮುಖ ಮಾಹಿತಿಯಾಗಬಹುದು ಎಂದು ಡಿಟೆಕ್ಟಿವ್ ಚೀಫ್ ಇನ್ಸ್‌ಪೆಕ್ಟರ್ ಲೀ ಹೋಲ್‌ಹೌಸ್ ಅವರು ಹೇಳಿದ್ದಾರೆ.
ಮೃತ ಯುವಕನ ಹಿರಿಯ ಸಹೋದರ ರವಿ ಕುಮಾರ್ ಅವರು ಮಾತನಾಡಿ, ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿರುವ ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದಲ್ಲಿ (UWE) ನನ್ನ ಕಿರಿಯ ಸಹೋದರ ವಿಜಯ್ ಕುಮಾರ್ ಓದುತ್ತಿದ್ದ. ನವೆಂಬರ್ 25 ರಂದು ಇರಿದು ಹತ್ಯೆ ಮಾಡಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ದುರದೃಷ್ಟಕರ ಘಟನೆಯಿಂದ ನಮ್ಮ ಕುಟುಂಬವು ಕುಸಿದಿದೆ. ಈ ನೋವಿನ ಸಮಯದಲ್ಲಿ, ನನ್ನ ಸಹೋದರನ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಭಾರತಕ್ಕೆ ತರಲು ನಾವು ಸಚಿವಾಲಯದ ಬೆಂಬಲವನ್ನು ಕೋರುತ್ತೇವೆಂದು ಹೇಳಿದ್ದಾರೆ.
ಸಂಕೀರ್ಣವಾದ ವಿದೇಶಿ ಕಾರ್ಯವಿಧಾನಗಳು, ಕಾನೂನು ವಿಧಿವಿಧಾನಗಳು, ದಾಖಲಾತಿಗಳು ಮತ್ತು ಆರ್ಥಿಕ ಅಂಶಗಳಿಂದಾಗಿ ಈ ಪ್ರಕ್ರಿಯೆಯನ್ನು ನಾವೇ ನಿರ್ವಹಿಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ, ತಕ್ಷಣದ ಸಹಾಯಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ನಾನು ನಿಮ್ಮನ್ನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಮೃತದೇಹಗಳನ್ನು ಭಾರತಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಬೆಂಬಲವನ್ನು ನೀಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳು, ಪರಿಶೀಲನೆ, ಅಧಿಕಾರಿಗಳೊಂದಿಗೆ ಸಮನ್ವಯ ಮತ್ತು ಸಾರಿಗೆಯಲ್ಲಿ ನಮಗೆ ಸಹಾಯ ಮಾಡಿ ಎಂದು ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.