ಲಾಹೋರ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಡಳಿತ ವಿರೋಧಿ ಅಲೆ ಈಗ ಹಿಂಸಾತ್ಮಕ ಪ್ರತಿಭಟನೆಗಳಿಗೆ ತಿರುಗಿದ್ದು, ಈ ವರೆಗೂ ಸರ್ಕಾರಿ ವಿರೋಧಿ ದಂಗೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
ಹೌದು.. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಸತತ 3ನೇ ದಿನಕ್ಕೆ ಕಾಲಿಟ್ಟಿದ್ದು, ಸತತ ಮೂರನೇ ದಿನವೂ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ, ಹಿಂಸಾಚಾರದಲ್ಲಿ ಇದುವರೆಗೂ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ.
ಬಾಗ್ ಜಿಲ್ಲೆಯ ಧೀರ್ಕೋಟ್‌ನಲ್ಲಿ ನಾಲ್ವರು ಜನರು ಸಾವನ್ನಪ್ಪಿದ್ದರೆ, ಮುಜಫರಾಬಾದ್‌ನಲ್ಲಿ ಇಬ್ಬರು ಮತ್ತು ಮಿರ್ಪುರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಪಾಕ್ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪಿಒಕೆ ಜನ, ಕಳೆದ ಮೂರು ದಿನಗಳಿಂದ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಈ ಪ್ರತಿಭಟನೆಗಳನ್ನು ಸೇನೆಯನ್ನು ಬಳಸಿಕೊಂಡು ಹತ್ತಿಕ್ಕುತ್ತಿದ್ದು, ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 8 ಜನ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆಗಳು ಈಗಲೂ ಮುಂದುವರೆದಿವೆ.
'ಮೂಲಭೂತ ಹಕ್ಕುಗಳ ನಿರಾಕರಣೆ'ಯ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಕಳೆದ 72 ಗಂಟೆಗಳಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ ಪಿಒಕೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಪ್ರತಿಭಟನೆಗಳಿಂದಾಗಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.
ಸೇನಾಧಿಕಾರಿಗಳ Kidnap
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಜನಸಂದಣಿಯನ್ನು ನಿಯಂತ್ರಿಸಲು ಕರೆತರಲಾಗಿದ್ದ ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸ್ ಸಿಬ್ಬಂದಿಯನ್ನು ಇಂದು ಪಿಒಕೆ ನಾಗರಿಕ ಪ್ರತಿಭಟನಾಕಾರರು ಸೆರೆಹಿಡಿದು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕೋಪಗೊಂಡ ಕಾಶ್ಮೀರಿಗಳು ಪಾಕಿಸ್ತಾನಿ ಪೊಲೀಸರನ್ನು ಮೊಣಕಾಲೂರುವಂತೆ ಮಾಡಿ ಕರೆದೊಯ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಸೇನಾ ಟ್ರಕ್ ಅನ್ನೇ ನದಿಗೆಸೆದ ಪ್ರತಿಭಟನಾಕಾರರು
ಅಂತೆಯೇ ಸಿನಿಮೀಯ ದೃಶ್ಯದ ರೀತಿಯಲ್ಲಿ ಪಿಒಕೆಯಲ್ಲಿರುವ ದಡಿಯಾಲ್‌ನ ಪಾಲಕ್ ಸೇತುವೆಯಲ್ಲಿ ಕಾಶ್ಮೀರಿ ಪ್ರತಿಭಟನಾಕಾರರು ಪಾಕಿಸ್ತಾನಿ ಪಂಜಾಬಿ ಸೇನೆಯ 3 ಬೃಹತ್ ಕಂಟೇನರ್‌ಗಳನ್ನು ತಡೆ ಹಿಡಿದಿದ್ದಾರೆ. ಮಾತ್ರವಲ್ಲದೇ ಈ ಪೈಕಿ ಒಂದು ಟ್ರಂಕ್ ಅನ್ನು ಸ್ಥಳೀಯರು ಬರಿ ಕೈಗಳಿಂದಲೇ ಅವುಗಳನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾರೆ. ಆಕ್ರಮಿತ ಕಾಶ್ಮೀರದಾದ್ಯಂತ ದಂಗೆ ವೇಗವಾಗಿ ಹರಡುತ್ತಿದ್ದು, ಸೇನಾ ಕಂಟೇನರ್‌ಗಳು ಜನರ ಕೋಪಕ್ಕೆ ತುತ್ತಾಗಿವೆ.