ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಭದ್ರತಾ ಪಡೆಗಳು ಗುಂಡು ಹಾರಿಸಿದ್ದರಿಂದ ಕನಿಷ್ಠ 12 ನಾಗರಿಕರು ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಅಶಾಂತಿಗಳಲ್ಲಿ ಒಂದಾಗಿದೆ.
38 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರಾರಂಭವಾದ ಪ್ರತಿಭಟನೆಗಳು, ಈ ಪ್ರದೇಶದಲ್ಲಿ ಮಿಲಿಟರಿಯ ಅತಿರೇಕದ ವಿರುದ್ಧ ವ್ಯಾಪಕ ಪ್ರತಿಭಟನೆಯಾಗಿ ಮಾರ್ಪಟ್ಟಿದೆ.
ಮೂರನೇ ದಿನಕ್ಕೆ ಕಾಲಿಟ್ಟಿರುವ ಘರ್ಷಣೆ, ಪಾಕಿಸ್ತಾನ ಭದ್ರತಾ ಪಡೆಗಳು ಗುಂಡು ಹಾರಿಸಿ ಜನಸಮೂಹವನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿವೆ. ಮುಜಫರಾಬಾದ್‌ನಲ್ಲಿ ಐದು, ಧೀರ್‌ಕೋಟ್‌ನಲ್ಲಿ ಐದು ಮತ್ತು ದಡಿಯಾಲ್‌ನಲ್ಲಿ ಇಬ್ಬರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದು, ಮೂವರು ಪೊಲೀಸ್ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ.
200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅಶಾಂತಿಯನ್ನು ಹತ್ತಿಕ್ಕಲು ಪಂಜಾಬ್ ಮತ್ತು ಇಸ್ಲಾಮಾಬಾದ್‌ನಿಂದ ಸಾವಿರಾರು ಹೆಚ್ಚುವರಿ ಸೈನಿಕರನ್ನು ಕರೆಸಲಾಗಿದೆ.
ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (AAC) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು, ಪ್ರಕ್ಷುಬ್ಧ ಪ್ರದೇಶದಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿವೆ.
ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆಯಲ್ಲಿನ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವ ಬೇಡಿಕೆಯು ಆಂದೋಲನದ ಮೂಲವಾಗಿದೆ. ತೆರಿಗೆ ವಿನಾಯಿತಿ, ಹಿಟ್ಟು ಮತ್ತು ವಿದ್ಯುತ್ ಮೇಲಿನ ಸಬ್ಸಿಡಿಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು ಇತರ ಬೇಡಿಕೆಗಳಾಗಿವೆ.
ಸೆಪ್ಟೆಂಬರ್ 29 ರಂದು ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಮುಚ್ಚಲ್ಪಟ್ಟಿವೆ. ಮೊಬೈಲ್, ಇಂಟರ್ನೆಟ್ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿ (UKPNP) ವಕ್ತಾರ ನಾಸಿರ್ ಅಜೀಜ್ ಖಾನ್, ತುರ್ತು ಹಸ್ತಕ್ಷೇಪಕ್ಕಾಗಿ ವಿಶ್ವಸಂಸ್ಥೆ (UN) ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.