ಕಾಬೂಲ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಯಾಣ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ನಂತರ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಬೂಲ್‌ನ ವಿದೇಶಾಂಗ ಸಚಿವಾಲಯ ಶನಿವಾರ AFP ಗೆ ದೃಢಪಡಿಸಿದೆ.
ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡ ನಂತರ 2021ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಹಿರಿಯ ತಾಲಿಬಾನ್ ನಾಯಕ ಅಮೀರ್ ಖಾನ್ ಮುತ್ತಕಿ ಆಗಲಿದ್ದಾರೆ.
ಅಕ್ಟೋಬರ್ 7 ರಂದು ನಡೆಯುವ "ಮಾಸ್ಕೋ ಶೃಂಗಸಭೆಯ ನಂತರ" ತಾಲಿಬಾನ್ ಸಚಿವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ AFP ಗೆ ತಿಳಿಸಿದೆ.
ವಿಶ್ವಸಂಸ್ಥೆಯ ನಿರ್ಬಂಧಗಳ ಅಡಿಯಲ್ಲಿ ಮುತ್ತಕಿ ಅವರಿಗೆ ಅಕ್ಟೋಬರ್ 9 ಮತ್ತು 16 ರ ನಡುವೆ ನವದೆಹಲಿಗೆ ಭೇಟಿ ನೀಡಲು ಅವಕಾಶ ನೀಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮಿತಿಯು ಅವರ ಮೇಲಿನ ಪ್ರಯಾಣ ನಿಷೇಧಕ್ಕೆ ವಿನಾಯಿತಿ ನೀಡಿದೆ.
ಅಮೀರ್ ಖಾನ್ ಮುತ್ತಕಿ ಅವರು ನವದೆಹಲಿಗೆ ಆಗಮಿಸುತ್ತಿರುವುದು ಭಾರತ- ತಾಲಿಬಾನ್ ಸಂಬಂಧದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಯಾಕೆಂದರೆ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭಾರತದ ಕಾರ್ಯತಂತ್ರದ ನಡೆಯಾಗಿದೆ. ಮುತ್ತಕಿ ಅವರು 2021ರಿಂದ ಅಫ್ಘಾನ್ ನ ವಿದೇಶಾಂಗ ಸಚಿವರಾಗಿದ್ದಾರೆ.
ಇತ್ತೀಚೆಗೆ ಹಲವಾರು ಅಮೇರಿಕನ್ ಮತ್ತು ಬ್ರಿಟಿಷ್ ಕೈದಿಗಳನ್ನು ಬಿಡುಗಡೆ ಮಾಡಿದ ತಾಲಿಬಾನ್ ಸರ್ಕಾರ, ಯುಎಸ್ ನೇತೃತ್ವದ ಪಡೆಗಳ ವಿರುದ್ಧ 20 ವರ್ಷಗಳ ಯುದ್ಧದ ಹೊರತಾಗಿಯೂ ಇತರ ದೇಶಗಳೊಂದಿಗೆ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿರುವುದಾಗಿ ಹೇಳಿದೆ.