ಕಾಬೂಲ್: ಭಾರತ ಮತ್ತು ಅಪ್ಘಾನಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹತ್ತಿರವಾಗುತ್ತಿರುವಂತೆಯೇ ಪಾಕಿಸ್ತಾನ ಹೊಟ್ಟೆಗೆ ಬೆಕಿ ಬಿದ್ದಂಗೆ ಆಡ್ತಿದೆ.
ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಗಿ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಭೇಟಿ ನೀಡಿರುವಂತೆಯೇ ಅತ್ತ ಕಾಬೂಲ್ ನಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ. ಪೂರ್ವ ಕಾಬೂಲ್ ಬಳಿಯ ಜಿಲ್ಲೆ 8 ರಲ್ಲಿ ಹಲವು ಕಡೆಗಳಲ್ಲಿ ದಾಳಿಯಾಗಿರುವುದಾಗಿ ಅಪ್ಘಾನಿಸ್ತಾನ ತಿಳಿಸಿದೆ.
ಭಾರತ ತಾಲಿಬಾನ್ ಆಡಳಿತವನ್ನು ಇನ್ನೂ ಔಪಚಾರಿಕವಾಗಿ ಒಪ್ಪಿಕೊಂಡಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿ ತಾತ್ಕಾಲಿಕವಾಗಿ ಅದರ ಪ್ರಯಾಣದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ್ದು, ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ. ಅಂತಾರಾಷ್ಟ್ರೀಯ ಪ್ರತ್ಯೇಕತೆಯಿಂದ ಹೊರಬರಲು ಮತ್ತು ನ್ಯಾಯಸಮ್ಮತತೆಯನ್ನು ಪಡೆಯಲು ತಾಲಿಬಾನ್ ಪ್ರಯತ್ನಿಸುತ್ತಿದೆ.
ಈ ನಡುವೆ ಪಾಕಿಸ್ತಾನ ಕಾಬೂಲ್ ನ ಅಬ್ದುಲ್ ಹಕ್ ಚೌಕ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸ್ಫೋಟ ನಡೆಸಿದೆ. ಆದರೆ ಸ್ಪೋಟದಿಂದ ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಕೂಡಾ ಅಧಿಕೃತವಾಗಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಇದಕ್ಕೂ ಮುನ್ನಾ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಅಫ್ಘಾನ್ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದರು.
"ಸಾಕು ಸಾಕು, ನಮ್ಮ ತಾಳ್ಮೆ ಮುಗಿದಿದೆ. ಆಫ್ಘನ್ ನೆಲದಿಂದ ಭಯೋತ್ಪಾದನೆ ಸಹಿಸಲಾಗದು" ಎಂದು ಆಸಿಫ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೇಳಿದ್ದರು. ಪಾಕಿಸ್ತಾನದ ಮಾಧ್ಯಮಗಳು ಮತ್ತು ಇತರ ಹಲವಾರು ಸ್ಥಳೀಯ ಮೂಲಗಳು ಈ ದಾಳಿಗೆ ಪಾಕಿಸ್ತಾನದ ವಾಯುಪಡೆ ಕಾರಣವೆಂದು ಹೇಳಿವೆ.
TTP ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಅವರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ ಎನ್ನಲಾಗಿದೆ.