ಟೆಹ್ರಾನ್/ಇರಾನ್: ಜೂನ್‌ನಲ್ಲಿ ಇರಾನಿನ ಪರಮಾಣು ತಾಣಗಳ ಮೇಲಿನ ದಾಳಿಗಳನ್ನು ಉಲ್ಲೇಖಿಸಿದ ಇರಾನ್, ಟೆಹ್ರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕರೆ ಅಮೆರಿಕಾದ ಕ್ರಮಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಅಮೆರಿಕದ ಅಧ್ಯಕ್ಷರು ವ್ಯಕ್ತಪಡಿಸಿದ ಶಾಂತಿ ಮತ್ತು ಸಂವಾದದ ಬಯಕೆಯು ಇರಾನಿನ ಜನರ ಬಗ್ಗೆ ಅಮೆರಿಕದ ಪ್ರತಿಕೂಲ ಮತ್ತು ಕ್ರಿಮಿನಲ್ ನಡವಳಿಕೆಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ ಮಧ್ಯದಲ್ಲಿ, ಇಸ್ರೇಲ್ ಇರಾನ್ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸಿತು, ಪರಮಾಣು ಮತ್ತು ಮಿಲಿಟರಿ ಸೌಲಭ್ಯಗಳು ಮತ್ತು ವಸತಿ ಪ್ರದೇಶಗಳನ್ನು ಹೊಡೆದುರುಳಿಸಿ 1,000 ಕ್ಕೂ ಹೆಚ್ಚು ಜನರನ್ನು ಕೊಂದುಹಾಕಿತು.
ಇಸ್ರೇಲ್‌ನೊಂದಿಗಿನ 12 ದಿನಗಳ ಯುದ್ಧದಲ್ಲಿ, ಅಮೆರಿಕವು ಇರಾನ್‌ನಲ್ಲಿನ ಪ್ರಮುಖ ಪರಮಾಣು ಸೌಲಭ್ಯಗಳನ್ನು ಹೊಡೆದುರುಳಿಸಿತು, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಉನ್ನತ ಮಟ್ಟದ ಪರಮಾಣು ಮಾತುಕತೆಗಳನ್ನು ಹಳಿತಪ್ಪಿಸಿತು.
ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಪ್ರತೀಕಾರ ತೀರಿಸಿಕೊಂಡಿತು, ಇದು ಇಸ್ರೇಲ್‌ನಲ್ಲಿ ಡಜನ್ ಗಟ್ಟಲೆ ಜನರನ್ನು ಕೊಂದು ಹಾಕಿತು. ಜೂನ್ 24 ರಿಂದ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಜಾರಿಯಲ್ಲಿದೆ.
ಇಸ್ರೇಲ್ ನೆಸ್ಸೆಟ್‌ನಲ್ಲಿ ಮಾಡಿದ ಭಾಷಣದಲ್ಲಿ, ಟ್ರಂಪ್ ಅವರು ಇರಾನ್ ಜೊತೆ ಶಾಂತಿ ಒಪ್ಪಂದವನ್ನು ಬಯಸುತ್ತಿದ್ದೇವೆ. ಒಪ್ಪಂದವು ಜಾರಿಗೆ ಬರಲು ಚೆಂಡು ಇರಾನ್ ಅಂಗಳದಲ್ಲಿದೆ ಎಂದು ಹೇಳಿದ್ದರು. ಆದರೆ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ.
ರಾಜಕೀಯ ಮಾತುಕತೆಗಳ ಮಧ್ಯೆ ಒಬ್ಬ ವ್ಯಕ್ತಿಯು ಒಂದು ದೇಶದ ವಸತಿ ಪ್ರದೇಶಗಳು ಮತ್ತು ಪರಮಾಣು ಸೌಲಭ್ಯಗಳ ಮೇಲೆ ಹೇಗೆ ದಾಳಿ ಮಾಡಬಹುದು, ಮುಗ್ಧ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರನ್ನು ಕೊಂದು, ನಂತರ ಶಾಂತಿ ಮತ್ತು ಸ್ನೇಹವನ್ನು ಹೇಗೆ ಬೇಡಬಹುದು ಎಂದು ವಿದೇಶಾಂಗ ಸಚಿವಾಲಯ ಕೇಳಿದೆ.