ಕಾಬುಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಫ್ಘಾನಿಸ್ತಾನದ ನೆಲದಲ್ಲಿ ಪಾಕಿಸ್ತಾನ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ.
ಅಫ್ಘಾನಿಸ್ತಾನದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದ್ದು, ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಅಫ್ಘಾನಿಸ್ತಾನದ 10 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ. ಅಲ್ಲದೆ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಈ ದಾಳಿಯೊಂದಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಕದನ ವಿರಾಮ ಅಂತ್ಯಗೊಂಡಿದ್ದು, ಕಾಬುಲ್ ಕೂಡ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಕದನ ವಿರಾಮವನ್ನು ಮುರಿದಿದೆ ಮತ್ತು ಪಕ್ಟಿಕಾ ಪ್ರಾಂತ್ಯದ ಮೂರು ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅಫ್ಘಾನಿಸ್ತಾನ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ ಹತ್ತು ನಾಗರಿಕರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.