ನ್ಯೂಯಾರ್ಕ್: ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕು ಎಂದು ಭಾರತ ಆಗ್ರಹಿಸಿದೆ.
80ನೇ ವಿಶ್ವಸಂಸ್ಥೆಯ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಮಾತನಾಡಿದರು. ಈ ವೇಳೆ ಪಾಕಿಸ್ತಾನದ ವಿರುದ್ಧ ಗುಡುಗಿದರು.
ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ದಬ್ಬಾಳಿಕೆ, ಕ್ರೌರ್ಯ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆ ನಡೆಸುತ್ತಿದ್ದು, ಬಹಿರಂಗ ದಂಗೆ ನಡೆಸುತ್ತಿದೆ. ಅಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇದನ್ನು ಪಾಕಿಸ್ತಾನ ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿರುತ್ತದೆ ಎಂದು ಪುನರುಚ್ಚರಿಸಿದರು.
ವಸುಧೈವ ಕುಟುಂಬಕಂಗೆ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಎಲ್ಲರಿಗೂ ನ್ಯಾಯ, ಘನತೆ ಮತ್ತು ಸಮೃದ್ಧಿಗಾಗಿ ಭಾರತ ಇಡೀ ವಿಶ್ವವನ್ನು ಒಂದೇ ಕುಟುಂಬವಾಗಿ ನೋಡುತ್ತದೆ ಎಂದು ತಿಳಿಸಿದರು.
ಬಳಿಕ 2ನೇ ಮಹಾಯುದ್ಧದನಂತರ ವಿಶ್ವಸಂಸ್ಥೆಗೆ ಭಾರತ ನೀಡಿರುವ ಕೊಡುಗೆಗಳನ್ನು ಪರ್ವತನೇನಿ ಹರೀಶ್ ವಿವರಿಸಿದರು.
ಎರಡನೇ ಮಹಾಯುದ್ಧದ ನಂತರ ವಿಶ್ವಸಂಸ್ಥೆಯನ್ನು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭರವಸೆಯ ದಾರಿದೀಪವಾಗಿ ಸ್ಥಾಪಿಸಲಾಯಿತು. ಇದು ವಸಾಹತುಶಾಹಿ ಮುಕ್ತೀಕರಣವನ್ನು ಮುನ್ನಡೆಸಿತು. ಇದು ದಕ್ಷಿಣದಲ್ಲಿ ಹೊಸ ರಾಷ್ಟ್ರಗಳ ರಚನೆಯಲ್ಲಿ ಮುಖ ಪಾತ್ರ ವಹಿಸಿದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮಹತ್ವಾಕಾಂಕ್ಷೆಯ ಗುರುತುಗಳನ್ನು ರೂಪಿಸಿದೆ, ಸಾಂಕ್ರಾಮಿಕ ರೋಗಗಳು, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು.