ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೋ ನಗರದಲ್ಲಿ ಹಿಂಸಾತ್ಮಕ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 64 ಜನರು ಸಾವನ್ನಪ್ಪಿದ್ದಾರೆ.
ಮುಂಬರುವ COP30 ಹವಾಮಾನ ಶೃಂಗಸಭೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಗರವು ಆಯೋಜಿಸುವ ಕೆಲವೇ ದಿನಗಳ ಮೊದಲು ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ಕಾಂಪ್ಲೆಕ್ಸೊ ಡೊ ಅಲೆಮೊ ಮತ್ತು ಪೆನ್ಹಾ ಫಾವೆಲಾ ಸಂಕೀರ್ಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.
ನಾವು ಮಾದಕವಸ್ತು-ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೃಢವಾಗಿ ನಿಂತಿದ್ದೇವೆ ಎಂದು ರಿಯೊ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಹೇಳಿದ್ದಾರೆ. 2,500 ಭದ್ರತಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ದಾಳಿಯ ವೇಳೆ ಗ್ಯಾಂಗ್ ಸದಸ್ಯರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದರಿಂದ ಸಾವು ನೋವು ಹೆಚ್ಚಾಗಿದೆ. ಕಾರ್ಯಾಚರಣೆಯ ಬಳಿಕ ಅರಣ್ಯ ಪ್ರದೇಶಕ್ಕೆ ಶಸ್ತ್ರಸಜ್ಜಿತ ವ್ಯಕ್ತಿಗಳು ಪಲಾಯನ ಮಾಡಿದ್ದಾರೆ.
ಒಂದು ವರ್ಷದ ಸುದೀರ್ಘ ತನಿಖೆಯ ಬಳಿಕ ಈ ದಾಳಿ ನಡೆಸಲಾಗಿದೆ ಎಂದು ರಿಯೋ ಆಡಳಿತ ಹೇಳಿದೆ. ಲಿಬರಲ್ ಪಕ್ಷದ ಗವರ್ನರ್ ಆಗಿರುವ ಕ್ಯಾಸ್ಟ್ರೋ, ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡ ಸಿಲ್ವಾ ಅವರ ಸರ್ಕಾರ ಸ್ಥಳೀಯ ಅಪರಾಧಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ದೂರಿದರು.