ವಾಷಿಂಗ್ಟನ್: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ "ಇಬ್ಬರು ದೊಡ್ಡ ಸರ್ವಾಧಿಕಾರಿಗಳೊಂದಿಗೆ" ವೇದಿಕೆಯನ್ನು ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕಾ ಟೀಕಿಸಿದೆ.
ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು ಎಂದು ಹೇಳಿಕೆ ನೀಡಿ ಭಾರತದಲ್ಲಿ ಚರ್ಚೆಗಳನ್ನು ಹುಟ್ಟುಹಾಕುವಂತೆ ಮಾಡಿದ್ದ ಅಮೆರಿಕಾ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ ಇದೀಗ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ 'ಐಕ್ಯತೆಯ ಪ್ರದರ್ಶನ'ವನ್ನು 'ಸಮಸ್ಯಾತ್ಮಕ' ಎಂದು ಕರೆದಿದ್ದಾರೆ.
ಸೋಮವಾರ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಭಾರತ, ಚೀನಾ ಹಾಗೂ ರಷ್ಯಾದ ನಾಯಕರು ಐಕ್ಯತೆಯನ್ನು ಪ್ರದರ್ಶಿಸಿದರು.
ಇದರ ಬೆನ್ನಲ್ಲೇ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿರುವ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ ಅವರು, ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಒಗ್ಗಟ್ಟಿನ ಪ್ರದರ್ಶನ ಸಮಸ್ಯಾತ್ಮಕ ಎಂದು ಬಣ್ಣಿಸಿದ್ದಾರೆ.
ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿಗಳಾದ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕ ಮೋದಿಯವರು ಕೈ ಜೋಡಿಸುತ್ತಿರುವುದನ್ನು ನೋಡುವುದು ನಾಚಿಕೆಗೇಡಿನ ಸಂಗತಿ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಭಾರತವು ದಶಕಗಳಿಂದ ಚೀನಾದೊಂದಿಗೆ ಶೀತಲ ಸಮರ ನಡೆಸುತ್ತಿದೆ. ಹೀಗಾಗಿ ಮೋದಿ ಯಾವ ರೀತಿ ಯೋಜನೆ ಮಾಡುತ್ತಿದ್ದಾರೆಂಬುದುರ ಕುರಿತು ನನಗೆ ಖಚಿತತೆಯಿಲ್ಲ. ಆದರೆ, ಮೋದಿಯವರು ಈ ವಿಷಯದಲ್ಲಿ ರಷ್ಯಾಗೆ ಸಾಥ್ ನೀಡುವ ಬದಲು ಅಮೆರಿಕಾ, ಯುರೋಪ್ ಹಾಗೂ ಉಕ್ರೇನ್ ಜೊತೆಗಿರಬೇಕು. ರಷ್ಯಾ ಬಳಿ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಫಾಕ್ಸ್ ನ್ಯೂಸ್'ಗೆ ಸಂದರ್ಶನ ನೀಡಿದ್ದ ನವರೊ ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ಮಹಾನ್ ನಾಯಕ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದರು.
ನಾನು ಭಾರತೀಯ ಜನರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಿನ್ಸ್ ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಾವು ನಿಲ್ಲಿಸಬೇಕು ಎಂದು ತಿಳಿಸಿದ್ದರು.