ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸಿ ಭಾರತ ಲಾಭ ಗಳಿಸುತ್ತಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಹೇಳಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಪೀಟರ್ ನವರೊ, ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಲಾಭ ಗಳಿಸುತ್ತಿದೆ. ಈ ಅಕ್ರಮ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸಿಕೊಳ್ಳುತ್ತಿದೆ. ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುತ್ತದೆ. ಇನ್ನೊಂದೆಡೆ ಅಮೆರಿಕದ ಉದ್ಯಮಿಗಳಿಗೆ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವಂತೆ, ಸೂಕ್ಷ್ಮವಾದ ಸೇನಾ ತಂತ್ರಜ್ಞಾನ ವರ್ಗಾಯಿಸುವಂತೆ ಭಾರತ ಒತ್ತಾಯಿಸುತ್ತಿದೆ. ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಪಾಲಿಗೆ, ಭಾರತವು ತೈಲ ಖರೀದಿ ಅಕ್ರಮ ಹಣದ ಶುದ್ಧೀಕರಣ ಕೇಂದ್ರವಾಗಿದೆ ಎಂದು ಹೇಳಿದ್ದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು, ಅಮೆರಿಕದ ಕಾರ್ಯತಂತ್ರದ ಪಾಲುದಾರ ದೇಶವಾಗಿ ಇರಲು ಬಯಸಿದರೆ, ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದೂ ನಾಲಿಗೆ ಹರಿಬಿಟ್ಟಿದ್ದರು.
ಆರೋಪ ಬೆನ್ನಲ್ಲೇ, ಈ ವಿಷಯವನ್ನು ಸತ್ಯ ಪರಿಶೀಲನೆ ನಡೆಸಿರುವ ಎಕ್ಸ್, ಭಾರತ ಇಂಧನ ಭದ್ರತೆಗಾಗಿ ಕಾನೂನುಬದ್ಧವಾಗಿ ರಷ್ಯಾದ ತೈಲ ಖರೀದಿ ಮಾಡುತ್ತಿದ್ದು, ಇದು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.
ಸತ್ಯ ಪರಿಶೀಲನೆ ಬೆನ್ನಲ್ಲೇ ಎಲೋನ್ ಮಸ್ಕ್ ವಿರುದ್ಧ ಪೀಟರ್ ನವರೊ ಕೆಂಡಕಾರಿದ್ದು, ಜನರ ಪೋಸ್ಟ್‌ಗಳಲ್ಲಿ ಪ್ರಚಾರಕ್ಕೆ ಮಸ್ಕ್ ಅವಕಾಶ ನೀಡುತ್ತಿದ್ದಾರೆ. ಇದು ಕೆಟ್ಟ ಟಿಪ್ಪಣಿ, ಅಸಂಬದ್ಧವಷ್ಟೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ವ್ಯಾಪಾರವನ್ನು ಮತ್ತೆ ಟೀಕಿಸಿರುವ ಅವರು, ಭಾರತವು ಲಾಭ ಗಳಿಸಲು ಮಾತ್ರ ರಷ್ಯಾದ ತೈಲವನ್ನು ಖರೀದಿಸುತ್ತದೆ ಎಂದು ಪುನರುಚ್ಛರಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವುದಕ್ಕೂ ಮುನ್ನ ಭಾರತ ತೈಲ ಖರೀದಿಸಲಿಲ್ಲ. ಭಾರತ ಉಕ್ರೇನಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸಿ. ಅಮೆರಿಕನ್ನರ ಉದ್ಯೋಗಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಭಾರತ, ಚೀನಾ, ರಷ್ಯಾ ಸೇರಿ ವಿಶ್ವದ ಹಲವು ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ಅಮೆರಿಕಾ ತೆರಿಗೆ ಯುದ್ಧ ಆರಂಭಿಸಿದೆ, ರಷ್ಯಾದಿಂದ ಭಾರತದ ತೈಲ ಖರೀದಿ ಮುಂದಿಟ್ಟಿಕೊಂಡೇ ಭಾರತದ ಮೇಲೆ ಟ್ರಂಪ್ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಿಸಿದ್ದಾರೆ.