ಕಠ್ಮಂಡು: ನೆರೆಯ ನೇಪಾಳದಲ್ಲಿ ಭುಗಿಲೆದ್ದಿರುವ ಸಂಘರ್ಷ ತಾರಕಕ್ಕೇರಿರುವಂತೆಯೇ ಪ್ರಧಾನಿ ಕೆಪಿ ಶರ್ಮಾ ಒಲಿ (KP Sharma Oli) ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಚೀನಾಪರ ಒಲವು ಹೊಂದಿರುವ ಕೆಪಿ ಶರ್ಮಾ ಒಲಿ ಇತ್ತೀಚೆಗೆ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಷೇಧಿಸುವ ಕ್ರಮ ಕೈಗೊಂಡಿದ್ದರು. ಸರ್ಕಾರದ ಈ ನಿರ್ಧಾರದ ವಿರುದ್ಧ ನೇಪಾಳದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ಪ್ರತಿಭಟನೆಗಳು ಸಂಘರ್ಷವಾಗಿ ಮಾರ್ಪಟ್ಟಿದ್ದು, ಇದೀಗ ತಮ್ಮದೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ.
ಪ್ರತಿಭಟನಾಕಾರರು ರಾಜಧಾನಿ ಕಠ್ಮಂಡುವಿನ ಹಲವು ಭಾಗಗಳಲ್ಲಿ "ಕೆಪಿ ಚೋರ್, ದೇಶ್ ಛೋಡ್" (ಕೆಪಿ ಕಳ್ಳ, ದೇಶ ಬಿಟ್ಟು ತೊಲಗಿ) ಮತ್ತು "ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ" ಮುಂತಾದ ಘೋಷಣೆಗಳನ್ನು ಕೂಗಿದರು.
ನೇಪಾಳದ ರಾಜಕೀಯ ನಾಯಕರ ಮನೆ-ಕಚೇರಿಗಳ ಮೇಲೆ ದಾಳಿ ಮಾಡಿರುವ ಪ್ರತಿಭಟನಾಕಾರರು ನಾಯಕರ ಮನೆಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪ್ರತಿಭಟನಾಕಾರರಿಗೆ ಮಣಿದಿರುವ ಹಲವು ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಕೆಪಿ ಶರ್ಮಾ ಒಲಿ ರಾಜಿನಾಮೆ
ಇನ್ನು ಕೆಪಿ ಶರ್ಮಾ ಒಲಿ ರಾಜಿನಾಮೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಪ್ರಧಾನಿ ಒಲಿ ಪ್ರತಿಭಟನಾಕಾರರನ್ನು ಓಲೈಸಲು ಎಷ್ಟೇ ಪ್ರಯತ್ನಿಸಿದರೂ ಬಗ್ಗದ ಪ್ರತಿಭಟನಾಕಾರರು ಅವರ ರಾಜಿನಾಮೆಗೆ ಪಟ್ಟು ಹಿಡಿದಿದ್ದರು.
ಇದೇ ಕಾರಣಕ್ಕೆ ಕೆಪಿ ಶರ್ಮಾ ಒಲಿ ಸರ್ವಪಕ್ಷಗಳ ಸಭೆ ಕರೆದಿದ್ದರು. ಆದರೆ ಇದೀಗ ತಾವು ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನೇಪಾಳದ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಇಪ್ಪತ್ತೊಂದು ಸಂಸದರು ಮಂಗಳವಾರ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಆದೇಶ ವಿರೋಧಿಸಿ ನಡೆದ ತೀವ್ರ ಸ್ವರೂಪದ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲದೇ 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ನೇಪಾಳ ತೊರೆದ ಒಲಿ?
ಇದರ ನಡುವೆ ನೇಪಾಳದ ಪ್ರಧಾನಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದ್ದು, ನೇಪಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಭಾರತದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಶುರುವಾಗಿದೆ.
ಇದಕ್ಕೆ ಇಂಬು ನೀಡುವಂತೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ವಿದೇಶಾಂಗ ಸಚಿವ ಅರ್ಜು ದೇವುಬಾ ಮತ್ತು 7 ಕ್ಯಾಬಿನೆಟ್ ಸಚಿವರು ಕಠ್ಮಂಡುವಿನಿಂದ ನೇಪಾಳ ಸೇನಾ ಹೆಲಿಕಾಪ್ಟರ್ ಗಳ ಮೂಲಕ ತೆರಳಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗುತ್ತಿವೆ.
ಒಲಿ ಖಾಸಗಿ ನಿವಾಸಕ್ಕೂ ಬೆಂಕಿ
ನೇಪಾಳದ ವಿದ್ಯಾರ್ಥಿಗಳು ಮತ್ತು ಯುವಕರ ನೇತೃತ್ವದಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ದಿನವೂ ಮುಂದುವರೆದಿರುವಂತೆಯೇ ಪ್ರತಿಭಟನಾಕಾರರು ಬಾಲ್ಕೋಟ್ ನಲ್ಲಿರುವ ಪ್ರಧಾನಿ ಕೆಪಿ ಒಲಿ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ನೂರಾರು ಪ್ರತಿಭಟನಾಕಾರರು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಅವರ ಕಚೇರಿಗೆ ಪ್ರವೇಶಿಸಿದ ಕೆಲ ಹೊತ್ತಿನಲ್ಲೇ ಓಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಏನಿದು ವಿವಾದ?
ಹಿಂದೆ ಮುಂದೆ ನೋಡದೆ ನೇಪಾಳ ಸರ್ಕಾರವು ತೆಗೆದುಕೊಂಡು ಆ ಒಂದು ನಿರ್ಧಾರ ನೇಪಾಳದಲ್ಲಿ ಭಾರೀ ಅಲ್ಲೋಲ - ಕಲ್ಲೋಲ ಸೃಷ್ಟಿ ಮಾಡಿದೆ. ನೇಪಾಳದಲ್ಲಿ ಅಲ್ಲಿನ ಸರ್ಕಾರವು ಸೋಷಿಯಲ್ ಮೀಡಿಯಾ ಖಾತೆಗಳಾದ ಯೂಟ್ಯೂಬ್, ಎಕ್ಸ್, ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧ ಮಾಡಿ, ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸರ್ಕಾರದ ಆದೇಶ ಮಾಡಿತ್ತು. ಈ ಏಕಾಏಕಿ ನಿರ್ಧಾರ ಅಲ್ಲಿನ ಯುವ ಜನರನ್ನು ಕೆರಳಿಸಿದೆ. ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ.