ಕಠ್ಮಂಡು: ನೇಪಾಳದಲ್ಲಿ ಅಶಾಂತಿ ಮುಂದುವರೆದಿರುವಂತೆಯೇ ಕಠ್ಮಂಡುವಿನ ಪಶುಪತಿನಾಥ ದೇವಾಲಯದಿಂದ ವಾಪಸ್ಸಾಗುತ್ತಿದ್ದಾಗ ಭಾರತದ ಪ್ರವಾಸಿ ಬಸ್ ವೊಂದರ ಮೇಲೆ ಪ್ರತಿಭಟನಾಕರರು ದಾಳಿ ನಡೆಸಿದ್ದಾರೆ. ಇದರಿಂದಾಗಿ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಬಸ್ ಚಾಲಕ ಹೇಳಿದ್ದಾರೆ.
ಸೆಪ್ಟೆಂಬರ್ 9 ರಂದು ಭಾರತ-ನೇಪಾಳ ಗಡಿಯಲ್ಲಿರುವ ಸೊನೌಲಿ ಬಳಿ ಈ ಘಟನೆ ನಡೆದಿದ್ದು, 49 ಭಾರತೀಯ ಪ್ರವಾಸಿಗರಿದ್ದ ಬಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಕಿಟಕಿಗಳು ಪುಡಿ ಪುಡಿಯಾಗಿವೆ. ಮಹಿಳೆಯರು, ವೃದ್ದರು ಸೇರಿದಂತೆ ಅನೇಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಚಾಲಕ ಹೇಳಿದ್ದಾರೆ.
ಸ್ಥಳೀಯ ಅಧಿಕಾರಿಗಳು ಗಾಯಾಳುಗಳನ್ನು ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಉಳಿದ ಪ್ರಯಾಣಿಕರನ್ನು ನೇಪಾಳ ಸರ್ಕಾರದ ನೆರವಿನಿಂದ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
ಸೋನೌಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸ್ ಚಾಲಕ ರಾಮು ನಿಶಾದ್, "ಪಶುಪತಿನಾಥ ದೇವಾಲಯದಲ್ಲಿ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಪೊಂದು ನಮ್ಮ ಬಸ್ ಅನ್ನು ಸುತ್ತುವರೆದು ವಿನಾಕಾರಣ ದಾಳಿ ಮಾಡಿತು. ಮಹಿಳಾ ಮತ್ತು ವೃದ್ಧ ಪ್ರಯಾಣಿಕರಿದ್ದರು. ಆದರೆ ಪ್ರತಿಭಟನಾಕಾರರು ಅದನ್ನು ಲೆಕ್ಕಿಸಲಿಲ್ಲ ಎಂದು ಹೇಳಿದರು.
ನೇಪಾಳದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿರುವ Gen Z group ಸಂಸತ್ತನ್ನು ವಿಸರ್ಜಿಸಬೇಕು ಮತ್ತು ಜನರ ಇಚ್ಛೆಯನ್ನು ಪ್ರತಿಬಿಂಬಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದು, ಪ್ರತಿಭಟನೆಗಳಿಂದ ಮೃತಪಟ್ಟವರ ಸಂಖ್ಯೆ 34 ಕ್ಕೆ ಏರಿದೆ.
ಯುವ ಸಂಘಟನೆಯ ಕೆಲವು ಪ್ರತಿನಿಧಿಗಳು ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸೇನಾ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಮತ್ತು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ